ADVERTISEMENT

ಜಾತಿ ಗಣತಿಗೆ ತಡೆಯೊಡ್ಡಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ: ರಾಹುಲ್‌ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2024, 9:54 IST
Last Updated 5 ಅಕ್ಟೋಬರ್ 2024, 9:54 IST
<div class="paragraphs"><p>ರಾಹುಲ್‌ ಗಾಂಧಿ </p></div>

ರಾಹುಲ್‌ ಗಾಂಧಿ

   

ಪಿಟಿಐ ಚಿತ್ರ 

ಮುಂಬೈ: ಮೀಸಲಾತಿಗೆ ಶೇ 50ರ ಮಿತಿ ಹಾಕಲಾಗಿದೆ. ಇದು ‘ಕೃತಕ ಅಡ್ಡಿ’. ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಒಕ್ಕೂಟ ಜಾತಿ ಗಣತಿ ನಡೆಸಿ, ಪ್ರಸ್ತುತ ಮೀಸಲಾತಿಗೆ ನಿಗದಿಪಡಿಸಿರುವ ಮಿತಿಯನ್ನು ತೆಗೆದುಹಾಕಲಿದೆ. ಇದನ್ನು ಪ್ರಪಂಚದ ಯಾವುದೇ ಶಕ್ತಿಗೂ ತಡೆಯಲು ಸಾಧ್ಯವಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದರು.

ADVERTISEMENT

ಐತಿಹಾಸಿಕ ನಗರ ಕೊಲ್ಹಾಪುರದಲ್ಲಿ ನಡೆದ ಸಂವಿಧಾನ ಸಮ್ಮಾನ್‌ ಸಮ್ಮೇಳನ ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ‘ಇದು ಕಾಂಗ್ರೆಸ್ ನೀಡುತ್ತಿರುವ ವಾಗ್ದಾನ. ಮೀಸಲಾತಿಗೆ ನಿಗದಿ ಮಾಡಿರುವ ಶೇ 50ರ ಮಿತಿ ತೆಗೆದು ಹಾಕುತ್ತೇವೆ ಮತ್ತು ಜಾತಿ ಗಣತಿ ನಡೆಸುತ್ತೇವೆ. ಆರ್‌ಎಸ್‌ಎಸ್, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇದನ್ನು ಜಾರಿ ಮಾಡಲು ನಾನು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಮ್ಮ ಪಕ್ಷ ಬದ್ಧವಾಗಿದೆ. ಸತ್ಯವನ್ನು ತಿಳಿದುಕೊಳ್ಳುವುದರಲ್ಲಿ ಅಪಾಯ ಏನಿದೆ ಎಂದು ಪ್ರಶ್ನಿಸಿದರು.

‘ನಮಗೆ ಸರಿಯಾದ ದತ್ತಾಂಶ ಬೇಕು. ದಲಿತರು, ಹಿಂದುಳಿದ ವರ್ಗದವರು, ಬುಡಕಟ್ಟು ಜನರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದವರು ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿ ಬೇಕು. ಜಾತಿ ಗಣತಿ ನಡೆಸಬೇಕೆಂಬ ಬೇಡಿಕೆ ಮೂಲಕ ಸಂವಿಧಾನವನ್ನು ರಕ್ಷಿಸಲು ಯತ್ನಸುತ್ತಿದ್ದೇವೆ’ ಎಂದು ಒತ್ತಿ ಹೇಳಿದರು.

‘ಜಾತಿ ಗಣತಿಗೆ ಎರಡು ಉದ್ದೇಶಗಳಿವೆ. ಒಂದು; ಯಾವ ಸಮುದಾಯದ ಜನಸಂಖ್ಯೆ ಹೆಚ್ಚಿದೆ ಎಂದು ತಿಳಿಯಲು ಮತ್ತು  ಎರಡನೆಯದು; ಸಾಮಾಜಿಕ–ಆರ್ಥಿಕ ಸಮೀಕ್ಷೆ ನಡೆಸಲು. ಈ ಸಮೀಕ್ಷೆಯು ದೇಶದ ಸಂಸ್ಥೆಗಳಲ್ಲಿ ದಲಿತರು, ಬುಡಕಟ್ಟು ಸಮುದಾಯ ಮತ್ತು ಹಿಂದುಳಿದ ವರ್ಗದವರ ಪಾಲ್ಗೊಳ್ಳುವಿಕೆ ಎಷ್ಟಿದೆ ಎಂದು ತಿಳಿಸುತ್ತದೆ’ ಎಂದು ವಿವರಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ:

‘ಬಿಜೆಪಿಗೆ ಜಾತಿ ಗಣತಿ ಬೇಕಿಲ್ಲ. ಆರ್‌ಎಸ್‌ಎಸ್‌ ಇದರ ವಿರುದ್ಧವಾಗಿದೆ. ನಾನು ಜಾತಿ ಗಣತಿ ಬಗ್ಗೆ ಮಾತನಾಡಿದಾಗಲೆಲ್ಲ ಬಿಜೆಪಿಯವರು ಜಾತಿ ಗಣತಿ ನಡೆಯಕೂಡದು ಎನ್ನುತ್ತಾರೆ. ಜನರಿಗೆ ಸತ್ಯ ತಿಳಿಯುವುದು ಅವರಿಗೆ ಇಷ್ಟವಿಲ್ಲ’ ಎಂದು ಕಿಡಿಕಾರಿದರು.  

‘ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎನ್ನುತ್ತಿದ್ದರು. ಆದರೆ, ಜನರು ‘ಸಂವಿಧಾನಕ್ಕೆ ಗೌರವ ನೀಡಬೇಕು’ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದು ದೇಶದ ಜನರಿಗಿರುವ ಶಕ್ತಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.