ADVERTISEMENT

ನಿಮ್ಮವರಿಂದ ಬ್ರಿಟೀಷರಿಗೆ ಪ್ರೇಮಪತ್ರ: ಮತ ಜಿಹಾದ್ ಎಂದ ಫಡಣವೀಸ್‌ಗೆ ಒವೈಸಿ ಚಾಟಿ

ಪಿಟಿಐ
Published 11 ನವೆಂಬರ್ 2024, 4:28 IST
Last Updated 11 ನವೆಂಬರ್ 2024, 4:28 IST
<div class="paragraphs"><p>ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹಾಗೂ&nbsp;ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌</p></div>

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌

   

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ, ನಿಮ್ಮ ಪೂರ್ವಿಕರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು 'ಪ್ರೇಮಪತ್ರ'ಗಳನ್ನು ಬರೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.

'ಮಹಾ' ವಿಧಾನಸಭೆ ಚುನಾವಣೆ ಪ್ರಚಾರ ಕಾವೇರುತ್ತಿದೆ. ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, 'ಏಕ್‌ ಹೈ ತೊ ಸೇಫ್‌ ಹೈ' (ಒಗ್ಗಟ್ಟಿನಿಂದ ಇದ್ದರೆ, ಸುರಕ್ಷಿತವಾಗಿರುತ್ತೇವೆ) ಎಂದು ಜನರಿಗೆ ಕರೆ ನೀಡಿದ್ದರು. ಲೋಕಸಭೆ ಚುನಾವಣೆ ವೇಳೆ ಧುಲೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಎದುರಾದ ಅಲ್ಪ ಅಂತರದ ಸೋಲನ್ನು ಉಲ್ಲೇಖಿಸಿ ಪ್ರಚಾರದ ಮಾತನಾಡಿದ್ದ ಫಡಣವೀಸ್‌, ಮಹಾರಾಷ್ಟ್ರದಲ್ಲಿ ಇದೀಗ 'ಮತ ಜಿಹಾದ್‌' ನಡೆಯುತ್ತಿದೆ. ಧರ್ಮಯುದ್ಧ ಕೈಗೊಳ್ಳುವ ಮೂಲಕ ಅದನ್ನು ಹತ್ತಿಕ್ಕಬೇಕು ಎಂದಿದ್ದರು.

ADVERTISEMENT

ಔರಂಗಾಬಾದ್ ಪೂರ್ವ ಹಾಗೂ ಔರಂಗಾಬಾದ್ ಕೇಂದ್ರ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಎಐಎಂಐಎ ಅಭ್ಯರ್ಥಿಗಳ ಪರ ಛತ್ರಪತಿ ಸಂಭಾಜಿನಗರದ ಜಿನ್ಸಿ ಪ್ರದೇಶದಲ್ಲಿ ಪ್ರಚಾರ ನಡೆಸಿದ ಒವೈಸಿ, ಮೋದಿ ಹಾಗೂ ಫಡಣವೀಸ್‌ ವಿರುದ್ಧ ಕಿಡಿಕಾರಿದ್ದಾರೆ.

'ನಮ್ಮ ಪೂರ್ವಿಕರು ಬ್ರಿಟೀಷರ ವಿರುದ್ಧ ಜಿಹಾದ್‌ ನಡೆಸಿದ್ದರು. ಇದೀಗ, ಫಡಣವೀಸ್‌ ನಮಗೆ ಜಿಹಾದ್‌ ಬಗ್ಗೆ ಪಾಠ ಹೇಳುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ದೇವೇಂದ್ರ ಫಡಣವೀಸ್‌ ಒಂದಾಗಿ ಬಂದರೂ ಚರ್ಚೆಯಲ್ಲಿ ನನ್ನನ್ನು ಸೋಲಿಸಲಾಗದು' ಎಂದಿದ್ದಾರೆ.

'ಮತ ಜಿಹಾದ್‌ – ಧರ್ಮಯುದ್ಧ' ಹೇಳಿಕೆಗಳಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

ಹೈದರಾಬಾದ್‌ನ ಸಂಸದರೂ ಆಗಿರುವ ಒವೈಸಿ, 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಜಿಹಾದ್‌ ಮತ್ತು ಧರ್ಮಯುದ್ಧ ಎಲ್ಲಿಂದ ಬಂದವು? ನೀವು ಶಾಸಕರನ್ನು ಖರೀದಿಸಿದ್ದೀರಿ; ನಿಮ್ಮನ್ನು ಕಳ್ಳರು ಎನ್ನೋಣವೇ?' ಎಂದು ಪ್ರಶ್ನಿಸಿದ್ದಾರೆ.

ಫಡಣವೀಸ್‌ ಅವರು ಮತ ಜಿಹಾದ್‌ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಹೀರೊ ಬ್ರಿಟೀಷ್‌ ಆಳ್ವಿಕೆ ಇದ್ದಾಗ ಅವರಿಗೆ (ಬ್ರಿಟೀಷರಿಗೆ) ಪ್ರೇಮಪತ್ರ ಬರೆಯುತ್ತಿದ್ದರು. ಆ ಸಮಯದಲ್ಲಿ ನಮ್ಮ ಸ್ವಾತಂತ್ರ ಹೋರಾಟಗಾರರು ಬ್ರಿಟೀಷರಿಗೆ ಮನ್ನಣೆಯನ್ನೇ ನಿಡುತ್ತಿರಲಿಲ್ಲ ಎಂದಿದ್ದಾರೆ.

'ನಾವು ಬ್ರಿಟೀಷರ ವಿರುದ್ಧದ ಹೋರಾಟದ ಮಾದರಿಯನ್ನು ನೀಡಿದ್ದೇವೆ. ಲೋಕಸಭೆ ಚುನಾವಣೆ ವೇಳೆ ಮಾಲೆಗಾಂವ್‌ನಲ್ಲಿ ಮತಗಳು ಬಂದಿರಲಿಲ್ಲ ಎಂಬ ಕಾರಣಕ್ಕೆ, ಅವರು (ಫಡಣವೀಸ್‌) ಮತ ಜಿಹಾದ್‌ ಎನ್ನುತ್ತಿದ್ದಾರೆ. ಅವರು ಮತಗಳಿಸಲು ಆಗದಿದ್ದರೆ, ಅದನ್ನು ಜಿಹಾದ್‌ ಎಂದು ಆರೋಪಿಸುತ್ತಾರೆ. ಬಿಜೆಪಿ ಅಯೋಧ್ಯೆಯಲ್ಲಿಯೂ ಸೋತಿದೆ. ಅದು ಹೇಗೆ ಸಾಧ್ಯವಾಯಿತು?' ಎಂದು ಕೇಳಿದ್ದಾರೆ.

'ನಮ್ಮ ಪೂರ್ವಿಕರು ಬ್ರಿಟೀಷರ ವಿರುದ್ಧ ಜಿಹಾದ್‌ ನಡೆಸಿದ್ದರು. ನಿಮ್ಮವರಲ್ಲ. ಯಾರ ಪೂರ್ವಿಕರು ಬ್ರಿಟೀಷರಿಗೆ ಪ್ರೇಮಪತ್ರ ಬರೆದಿದ್ದರೋ ಅಂತಹ ಫಡಣವೀಸ್‌, ನಮಗೆ ಜಿಹಾದ್‌ ಬಗ್ಗೆ ಪಾಠ ಮಾಡುತ್ತಿದ್ದಾರೆ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಬಿಜೆಪಿಯು ದೇಶದಲ್ಲಿ ವೈವಿಧ್ಯತೆಯನ್ನು ಕೊನೆಗಾಣಿಸಲು ಬಯಸುತ್ತಿದೆ. ಹಾಗಾಗಿಯೇ ಮೋದಿ ಅವರು 'ಒಗ್ಗಟ್ಟಿನಿಂದ ಇದ್ದರೆ, ಸುರಕ್ಷಿತವಾಗಿರುತ್ತೇವೆ' ಎಂಬುದಾಗಿ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಹಿಂದಿನ ಸರ್ಕಾರಗಳು ಮರಾಠರಿಗೆ ಮೀಸಲಾತಿ ನೀಡಲು ವಿಫಲವಾಗಿದ್ದು, ಆ ಸಮುದಾಯಕ್ಕೆ ದ್ರೋಹ ಬರೆದಿವೆ ಎಂದು ದೂರಿದ್ದಾರೆ. ರಾಜ್ಯದ ಸಾಕಷ್ಟು ಉದ್ಯಮಗಳು ಗುಜರಾತ್‌ಗೆ ಸ್ಥಳಾಂತರಗೊಂಡವು. ಫಡಣವೀಸ್‌ ಅವನ್ನು ತಡೆಯುವ ಧೈರ್ಯ ತೋರಲಿಲ್ಲ. 'ಅವರಿಗೆ ಮೋದಿ ಕಂಡರೆ ಭಯವೇ?' ಎಂದು ಪ್ರಶ್ನಿಸಿದ್ದಾರೆ.

ಸಂತ ರಾಮಗಿರಿ ಮಹರಾಜ್‌ ಅವರು ಮಹಮ್ಮದ್ ಪೈಗಂಬರ್‌ ಅವರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಸಹಿಸಲಾಗದು ಎಂದೂ ಒವೈಸಿ ಹೇಳಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ 20ರಂದು ಮತದಾನ ನಡೆಯಲಿದೆ. ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.