ಮುಂಬೈ: ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವು ಗುರುವಾರ ತಡರಾತ್ರಿ 45 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ಠಾಣೆಯ ಕೊಪ್ರಿ–ಪಂಚಪಖಾಡಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದು, ಅರ್ಧ ಡಜನ್‌ಗೂ ಅಧಿಕ ಸಂಪುಟ ಸದಸ್ಯರು ಈ ಹಿಂದೆ ಪ್ರತಿನಿಧಿಸಿದ್ದ ಕ್ಷೇತ್ರಗಳಲ್ಲೇ ಟಿಕೆಟ್ ಪಡೆದಿದ್ದಾರೆ. 2022ರ ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸಿಡಿದು ಹೊರಬಂದ ಏಕನಾಥ ಶಿಂದೆ ಬೆಂಬಲಿಗ ಎಲ್ಲ ಶಾಸಕರಿಗೂ ಟಿಕೆಟ್ ನೀಡಲಾಗಿದೆ.
ಸಚಿವರಾದ ಗುಲಾಬ್ ರಾವ್ ಪಾಟೀಲ್, ದೀಪಕ್ ಕೇಸರ್‌ಕರ್, ಅಬ್ದುಲ್ ಸತ್ತಾರ್ ಮತ್ತ ಶಂಬುರಾಜ್ ದೇಸಾಯಿ ಅವರು ಕ್ರಮವಾಗಿ ಜಲಗ್ರಾಮ ಗ್ರಾಮೀಣ, ಸಾವಂತವಾಡಿ, ಸಿಲ್ಲೋಡ್ ಮತ್ತು ಪಟಾಣ್ ಕ್ಷೇತ್ರಗಳಿಂದ ಕಣಕ್ಕಿಳಿಯುತ್ತಿದ್ದಾರೆ. ಮತ್ತೊಬ್ಬ ಸಂಪುಟ ಸದಸ್ಯ ದಾದಾ ಭುಸೆ ಅವರು ಮಾಲೆಗಾಂವ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಚಿವರಾದ ಉದಯ್ ಸಾವಂತ್ ಮತ್ತು ತಾನಾಜಿ ಸಾವಂತ್ ಅವರು ಕ್ರಮವಾಗಿ ರತ್ನಗಿರಿ ಮತ್ತು ಪರಾಂಡದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಶಿವಸೇನೆಯ ಮತ್ತೊಬ್ಬ ಪ್ರಮುಖ ನಾಯಕ ಸದಾ ಸಾವರ್ಕರ್ ಅವರು ಮುಂಬೈನ ಮಹಿಮ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.
ಹಲವು ಶಾಸಕರ ಸಂಬಂಧಿಕರನ್ನೂ ಶಿವಸೇನಾ ಅದೃಷ್ಟ ಪರೀಕ್ಷೆಗೆ ಇಳಿಸಿದೆ. ಉದಯ್ ಸಾವಂತ್ ಸಹೋದರ ಕಿರಣ್ ಸಾವಂತ್‌ಗೆ ರಾಜಪುರದಿಂದ, ದಿವಂಗತ ಮಾಜಿ ಶಾಸಕ ಅನಿಲ್ ಬಾಬರ್ ಪುತ್ರ ಸುಹಾಸ್ ಬಾಬರ್‌ಗೆ ಸಾಂಗ್ಲಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಮುಂಬೈ ವಾಯುವ್ಯ ಕ್ಷೇತ್ರದ ಸಂಸದ ರವೀಂದ್ರ ವೇಕರ್ ಪತ್ನಿ ಮನಿಶಾ ವೇಕರ್ ಅವರಿಗೆ ಜೋಗೇಶ್ವರಿ ಪೂರ್ವ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಮಾಜಿ ಕೇಂದ್ರ ಸಚಿವ ಆನಂದ್ ಅದ್ಸೂಲ್ ಅವರ ಮಗ ಅಭಿಜಿತ್ ಅದ್ಸೂಲ್ ಅವರಿಗೆ ಅಮರಾವತಿ ಜಿಲ್ಲೆಯ ದಾರ್ಯಪುರ, ಛತ್ರಪತಿ ಸಾಂಭಾಜಿನಗರ್ ಸಂಸದ ಸಂದೀಪನ್ ಭುಮ್ರೆ ಮಗ ವಿಲಾಸ್ ಭುಮ್ರೆ ಅವರಿಗೆ ಪೀಥಾನ್ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ.
ಈ ಮೂಲಕ ಮಹಾರಾಷ್ಟ್ರದ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಎರಡನೇ ಪ್ರಮುಖ ಪಕ್ಷ ಶಿವಸೇನಾ ಆಗಿದೆ. ಶಿವಸೇನಾ ಮಿತ್ರ ಪಕ್ಷ ಬಿಜೆಪಿ ಭಾನುವಾರ 99 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿತ್ತು.
288 ವಿಧಾನಸಭಾ ಕ್ಷೇತ್ರಗಳಿರುವ ಮಹಾರಾಷ್ಟ್ರ ಚುನಾವಣೆಗೆ ಆಡಳಿತಾರೂಢ ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಒಳಗೊಂಡ ಮಹಾಯುತಿ ಮೈತ್ರಿಕೂಟವು ಇನ್ನಷ್ಟೇ ಸೀಟು ಹಂಚಿಕೆಯ ಫಾರ್ಮುಲಾ ಬಹಿರಂಗಪಡಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.