ಪುಣೆ: ಇಬ್ಬರು ಶಂಕಿತ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ್ದ ಆರೋಪದಡಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ರತ್ನಗಿರಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
ಇಬ್ಬರು ಶಂಕಿತ ಉಗ್ರರನ್ನು ಜುಲೈ 18ರಂದು ಬಂಧಿಸಲಾಗಿತ್ತು. ಈ ಸಂಬಂಧ ರತ್ನಗಿರಿ ಜಿಲ್ಲೆಯ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈಗ ಬಂಧಿಸಲಾಗಿದೆ. ಬಂಧಿತರ ಸಂಖ್ಯೆ 4ಕ್ಕೆ ಏರಿದೆ ಎಂದು ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ, ಬಂಧಿತನ ವಿವರಗಳನ್ನು ಎಟಿಎಸ್ ಬಹಿರಂಗಪಡಿಸಿಲ್ಲ. ಎಟಿಎಸ್ ತಂಡ ತನಿಖೆಗಾಗಿ ಮತ್ತೊಂದು ರಾಜ್ಯಕ್ಕೆ ತೆರಳಿದೆ. ತನಿಖೆಗೆ ಹಾಜರಾಗಲು ಸೂಚಿಸಿ ಶಂಕಿತನೊಬ್ಬನಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದೆ.
ಶಂಕಿತ ಉಗ್ರರಾದ ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನುಸ್ ಖಾನ್ (23), ಮೊಹಮ್ಮದ್ ಯೂನುಸ್ ಮೊಹಮ್ಮದ್ ಯಾಕುಬ್ ಸಕಿ (24) ಅವರಿಗೆ ಆಶ್ರಯ ನೀಡಿದ್ದ ಅಬ್ದುಲ್ ಖಾದಿರ್ ದಸ್ತಗೀರ್ ಪಠಾಣ್‌ರನ್ನು ಪುಣೆಯಲ್ಲಿ ಬುಧವಾರವಷ್ಟೇ ಬಂಧಿಸಲಾಗಿತ್ತು.
ರಾಜಸ್ಥಾನದಲ್ಲಿ ನಡೆದಿದ್ದ ಭಯೋತ್ಪಾದನಾ ಕೃತ್ಯವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾದ ಖಾನ್ ಮತ್ತು ಸಕಿ ಅವರು ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಬೇಕಾಗಿದ್ದರು. ಇವರನ್ನು ಪುಣೆಯ ಕೊತ್ರುಡ್‌ನಲ್ಲಿ ಜುಲೈ 18ರಂದು ಬಂಧಿಸಲಾಗಿತ್ತು.
ಇಬ್ಬರೂ ಮಧ್ಯಪ್ರದೇಶದ ರತ್ಲಂ ನಿವಾಸಿಗಳಾಗಿದ್ದು, ಗ್ರಾಫಿಕ್ ಡಿಸೈನರ್ ಆಗಿದ್ದರು. ಇವರ ಬಗ್ಗೆ ಸುಳಿವು ನೀಡಿದವರಿಗೆ ತಲಾ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.