ADVERTISEMENT

ಮಹಾರಾಷ್ಟ್ರ BJP ಅಧ್ಯಕ್ಷನ ಮಗನ ಔಡಿ ಡಿಕ್ಕಿ; ಹಲವು ವಾಹನಗಳು ಜಖಂ, ಇಬ್ಬರ ಬಂಧನ

ಪಿಟಿಐ
Published 9 ಸೆಪ್ಟೆಂಬರ್ 2024, 15:18 IST
Last Updated 9 ಸೆಪ್ಟೆಂಬರ್ 2024, 15:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನಾಗ್ಪುರ: ಮಹಾರಾಷ್ಟ್ರ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರ ಪುತ್ರ ಸಂಕೇತ್‌ಗೆ ಸೇರಿದ್ದ ಔಡಿ ಕಂಪನಿಯ ವಿಲಾಸಿ ಕಾರು, ಸೋಮವಾರ ನಸುಕಿನಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಇಬ್ಬರಿಗೆ ಗಾಯಗಳಾಗಿವೆ.

ನಾಗ್ಪುರದ ಸೀತಾಬುಲ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದಾಸ್‌ಪೇಠ್ ಪ್ರದೇಶದಲ್ಲಿ ಸೋಮವಾರ ನಸುಕಿನ ಒಂದು ಗಂಟೆಯಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ವರದಿಯಾಗಿದೆ. ಆದರೆ ಇಬ್ಬರನ್ನು ಮಾತ್ರ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ADVERTISEMENT

‘ಔಡಿ ಕಾರು ಮೊದಲಿಗೆ ಜಿತೇಂದ್ರ ಸೊನ್‌ಕಾಂಬ್ಳೆ ಅವರಿಗೆ ಸೇರಿದ ಕಾರಿಗೆ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಇದೇ ಕಾರು ಮಂಕಾಪುರ್ ಪ್ರದೇಶದಲ್ಲಿ ಇನ್ನಷ್ಟು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ನಂತರ ಫೋಕ್ಸ್‌ವ್ಯಾಗನ್ ಪೋಲೊ ಕಾರಿಗೂ ಡಿಕ್ಕಿಪಡಿಸಲಾಗಿದೆ. ಔಡಿ ಕಾರನ್ನು ಬೆನ್ನಟ್ಟಿದ ಪೋಲೊ ಚಾಲಕ ಮಂಕಾಪುರ ಸೇತುವೆ ಬಳಿ ತಡೆದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾರಿನಲ್ಲಿ ಮೂವರು ಪ್ರಯಾಣಿಕರು ಇದ್ದರು. ಕಾರಿನೊಳಗಿದ್ದ ಸಂಕೇತ್ ಬಂವಾಂಕುಳೆ ಘಟನೆ ನಂತರ ಪರಾರಿಯಾದರು. ಕಾರಿನ ಚಾಲಕ ಅರ್ಜುನ್ ಹಾವ್ರೆ ಹಾಗೂ ರೋನಿತ್ ಚಿತ್ತಂವಾರ್‌ ಅವರನ್ನು ತೆಹ್ಸಿಲ್ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಲಾಗಿದೆ’ ಎಂದು ಪೋಲೊ ಕಾರಿನ ಚಾಲಕ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಸೊನ್‌ಕಾಂಬ್ಳೆ ನೀಡಿದ ದೂರು ಆಧರಿಸಿ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಆರೋಪದಡಿ ಪೊಲೀಸರು ದೂರು ದಾಖಲಿಸಿದ್ದಾರೆ. ನಂತರ ಠಾಣಾ ಜಾಮೀನನಡಿ ಇಬ್ಬರನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಚಂದ್ರಶೇಖರ ಬವಾಂಕುಲೆ, ‘ಅಪಘಾತಕ್ಕೀಡಾದ ಔಡಿ ಕಾರು ತಮ್ಮದೇ ಆಗಿದ್ದು, ಮಗ ಸಂಕೇತ್‌ ಹೆಸರಿನಲ್ಲಿ ನೋಂದಣಿಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಪೂರ್ವಗ್ರಹ ಪೀಡಿತರಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಈ ವಿಷಯದಲ್ಲಿ ನಾನು ಯಾವುದೇ ಪೊಲೀಸ್ ಅಧಿಕಾರಿಗೆ ಕರೆ ಮಾಡಿಲ್ಲ. ಎಲ್ಲರಿಗೂ ಕಾನೂನು ಒಂದೇ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.