ADVERTISEMENT

ಮಹಾರಾಷ್ಟ್ರ: ಅಧಿಕಾರಕ್ಕೇರುವ ಮುನ್ನವೇ ಅತೃಪ್ತಿಯ ಅಲೆ

ಮಿತ್ರ ಪಕ್ಷ ಬಿಜೆಪಿ ವಿರುದ್ಧವೇ ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 19:45 IST
Last Updated 25 ಅಕ್ಟೋಬರ್ 2019, 19:45 IST
   

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮರುದಿನವೇ ಶಿವಸೇನಾ ತನ್ನ ಸಹಜ ಮನಸ್ಥಿತಿಗೆ ಮರಳಿದೆ. ಬಿಜೆಪಿಯ ವಿರುದ್ಧ ಹರಿಹಾಯ್ದಿದೆ. ಚುನಾವಣಾ ಫಲಿತಾಂಶವು ಅಧಿಕಾರದ ಮದ ಏರಿದವರಿಗೆ ಪಾಠ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಮುಖವಾಣಿಯಲ್ಲಿ ಹೇಳಲಾಗಿದೆ.

‘ಪಕ್ಷಾಂತ ಮತ್ತು ವಿರೋಧ ಪಕ್ಷಗಳನ್ನು ಒಡೆಯುವ ಮೂಲಕ ಚುನಾವಣೆ ಗೆಲ್ಲಬಹುದು ಎಂಬ ಚಿಂತನೆ
ಯನ್ನೇ ಮತದಾರ ತಿರಸ್ಕರಿಸಿದ್ದಾನೆ’ ಎಂದೂ ಸಂಪಾದಕೀಯದಲ್ಲಿ ಹೇಳಲಾಗಿದೆ. ಶಿವಸೇನಾದ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರೇ ‘ಸಾಮ್ನಾ’ದ ಸಂಪಾದಕ.

ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಮನಸ್ಸಿನಲ್ಲಿ ಇರುವುದನ್ನೇ ಸಾಮ್ನಾ ಧ್ವನಿಸಿದೆ.

ADVERTISEMENT

‘ಇದು ಭಾರಿ ದೊಡ್ಡ ಜನಾದೇಶ’ ಅಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಚುನಾವಣೆಗೂ ಮುನ್ನ ಕೈಗೊಂಡಿದ್ದ ‘ಜನಾದೇಶ ಯಾತ್ರೆ’ಯನ್ನು ಗೇಲಿ ಮಾಡಲಾಗಿದೆ.

ರಾಜಕೀಯದಲ್ಲಿ ಪ್ರತಿಸ್ಪರ್ಧಿಗಳನ್ನು ಮುಗಿಸಲು ಸಾಧ್ಯವಿಲ್ಲ. ಚುನಾವಣೆಗೆ ಮೊದಲು ಎನ್‌ಸಿಪಿಯನ್ನು ಬಿಜೆಪಿ ಯಾವ ರೀತಿ ಒಡೆಯಿತೆಂದರೆ, ಆ ಪಕ್ಷಕ್ಕೆ ಭವಿಷ್ಯವೇ ಇಲ್ಲ ಎಂದು ಜನರು ಭಾವಿಸುವಂತಾಗಿತ್ತು. ಆದರೆ, 50ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದಿರುವ ಎನ್‌ಸಿಪಿ ಪುಟಿದೆದ್ದಿದೆ. ನಾಯಕರೇ ಇಲ್ಲದ ಕಾಂಗ್ರೆಸ್‌ ಕೂಡ 44 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ ಎಂದು ಸಂಪಾದಕೀಯ ಹೇಳಿದೆ.

‘ಆಡಳಿತ ನಡೆಸುವವರು ಅಧಿಕಾರದ ಅಹಂಕಾರವನ್ನು ತೋರಬಾರದು ಎಂಬ ಎಚ್ಚರಿಕೆಯನ್ನು ಫಲಿತಾಂಶವು ನೀಡಿದೆ. ಪಕ್ಷಾಂತರಿಗಳಿಗೂ ಜನರು ಪಾಠ ಕಲಿಸಿದ್ದಾರೆ’ ಎಂದೂ ಹೇಳಲಾಗಿದೆ.

ಸಾತಾರಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉದಯನ್‌ರಾಜೇ ಭೋಸಲೆ ಅವರ ಸೋಲಿನ ಬಗ್ಗೆಯೂ ಉಲ್ಲೇಖಿಸಲಾಗಿದೆ. ‘ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಕಾರಣಕ್ಕೆ ಸಾತಾರಾ ‘ಗಾದಿ’ಯ ಬಗ್ಗೆ ನಮಗೆ ಗೌರವವಿದೆ’. ಶಿವಾಜಿ ಹೆಸರಿನಲ್ಲಿ ರಾಜಕೀಯ ಅವಕಾಶವಾದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಜನರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.

ಶಿವಾಜಿಯ ವಂಶಸ್ಥರಾದ ಭೋಸಲೆ ಅವರು ಎನ್‌ಸಿಪಿಯಿಂದ ಈ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ, ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ. ಇದು ಬೋಸಲೆಯ ವೈಯಕ್ತಿಕ ಸೋಲು ಎಂದೂ ‘ಸಾಮ್ನಾ’ ಹೇಳಿದೆ.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ಅವರು ಉದಯನ್‌ರಾಜೇ ಪರವಾಗಿ ಹಲವು ರ‍್ಯಾಲಿಗಳಲ್ಲಿ ಮಾತನಾಡಿದ್ದಾರೆ. ಉದಯನ್‌ರಾಜೇ ಅವರು ಈಗ ಬಿಜೆಪಿಯಲ್ಲಿದ್ದಾರೆ. ಹಾಗಾಗಿ, ಪಕ್ಷಕ್ಕೆ ಶಿವಾಜಿಯ ಆಶೀರ್ವಾದವೂ ಇದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದರು. ಹಾಗಿದ್ದರೂ ಉದಯನ್‌ರಾಜೇ ಸೋತಿದ್ದಾರೆ’ ಎಂದಿದೆ.

ಹಾಗಾಗಿ, ಬಿಜೆಪಿಯ ಮುಖ್ಯಮಂತ್ರಿಗಿಂತ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರೇ ಶಕ್ತಿಶಾಲಿ ಎಂಬುದು ಸಾಬೀತಾಗಿದೆ ಎಂದು ಸಾಮ್ನಾ ಅಭಿಪ್ರಾಯಪಟ್ಟಿದೆ.

‘ಹುಲಿ’ ಎದೆಯಲ್ಲಿ ‘ಗಡಿಯಾರ’

ಶಿವಸೇನಾ ಸಂಸದ ಸಂಜಯ ರಾವತ್‌ ಅವರು ವ್ಯಂಗ್ಯಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪ್ರಕಟಿಸುವ ಮೂಲಕ ಮಿತ್ರಪಕ್ಷ ಬಿಜೆಪಿಗೆ ಕುಟುಕುವ ಯತ್ನ ಮಾಡಿದ್ದಾರೆ.

ಮಹಾರಾಷ್ಟ್ರದ ಫಲಿತಾಂಶವು ‘ಕುತೂಹಲಕರ ಸಾಧ್ಯತೆಗಳನ್ನು ತೆರೆದಿಟ್ಟಿದೆ’ ಎಂದು ಕಾಂಗ್ರೆಸ್‌ ಮುಖಂಡ ಪೃಥ್ವಿರಾಜ್‌ ಚವಾಣ್‌ ಗುರುವಾರ ಹೇಳಿದ್ದರು. ಆದರೆ, ಶಿವಸೇನಾ ಜತೆಗೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕೈಜೋಡಿಸಲಿದೆ ಎಂಬುದನ್ನು ನೇರವಾಗಿ ಅವರು ಹೇಳಿರಲಿಲ್ಲ. ಈ ಹೇಳಿಕೆಯ ಬಳಿಕ, ಬಿಜೆಪಿಯನ್ನು ಅಧಿಕಾರದಿಂದ ಹೊರಗೆ ಇರಿಸುವುದಕ್ಕಾಗಿ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಒಟ್ಟಾಗುವ ಲೆಕ್ಕಾಚಾರಗಳು ಹರಿದಾಡುತ್ತಿವೆ.

ಮಹಾರಾಷ್ಟ್ರದ ಅಧಿಕಾರದ ಕೀಲಿ ಶಿವಸೇನಾ ಕೈಯಲ್ಲಿದೆ ಎಂಬ ಮುಖಪುಟ ಲೇಖನವನ್ನು ‘ಸಾಮ್ನಾ’ ಶುಕ್ರವಾರ ಪ್ರಕಟಿಸಿದೆ.

***

ಈ ಸೋಲಿನಲ್ಲಿ (ಸಾತಾರಾ) ಪಾಠ ಇದೆ. ತಾನು ಶಕ್ತಿಶಾಲಿ ಕುಸ್ತಿಪಟು ಎಂದು ಫಡಣವೀಸ್‌ ಹೇಳಿದ್ದರು. ಆದರೆ, ಶರದ್‌ ಇನ್ನೂ ಹೆಚ್ಚು ಶಕ್ತಿವಂತ ಕುಸ್ತಿಪಟು

– ಸಾಮ್ನಾ ಸಂಪಾದಕೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.