ಮುಂಬೈ: ಬುಧವಾರ ರಾತ್ರಿ ನಿಧನರಾದ ದೇಶದ ಕೈಗಾರಿಕಾ ಕ್ಷೇತ್ರದ ದಂತಕಥೆ, ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡುವಂತೆ ಒತ್ತಾಯಿಸುವ ನಿರ್ಣಯವನ್ನು ಮಹಾರಾಷ್ಟ್ರದ ಸಚಿವ ಸಂಪುಟ ಕೈಗೊಂಡಿದೆ.
ಸಿಎಂ ಏಕನಾಥ ಶಿಂದೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂತಾಪ ಸೂಚಿಸಿದ ಬಳಿಕ ನಿರ್ಣಯ ಕೈಗೊಳ್ಳಲಾಯಿತು.
ರತನ್ ಟಾಟಾ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ.
ಸಮಾಜದ ಬೆಳವಣಿಗೆಗೆ ಉದ್ಯಮಶೀಲತೆ ಪರಿಣಾಮಕಾರಿ ಮಾರ್ಗವಾಗಿದೆ. ಹೊಸ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ದೇಶವನ್ನು ಪ್ರಗತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬಹುದು. ಇದಕ್ಕೆ ದೇಶ ಪ್ರೇಮ ಮತ್ತು ಸಮಾಜದ ಉನ್ನತಿಗೆ ಪ್ರಾಮಾಣಿಕತೆ ಬೇಕು. ದೇಶ ಮತ್ತು ಸಮಾಜಕ್ಕೆ ಬದ್ಧರಾಗಿರುವ ದೂರದೃಷ್ಟಿಯ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಕೈಗಾರಿಕಾ ಕ್ಷೇತ್ರ ಮತ್ತು ಸಮಾಜದ ಉನ್ನತಿಯಲ್ಲಿ ಟಾಟಾ ಅವರ ಪಾತ್ರ ಅಪ್ರತಿಮವಾಗಿದೆ. ಅವರು ಎಲ್ಲ ಸವಾಲುಗಳನ್ನು ಎದುರಿಸಿ, ಉನ್ನತ ನೈತಿಕತೆ, ಶಿಸ್ತಿನಿಂದ ಪಾರದರ್ಶಕ ಮತ್ತು ಸ್ವಚ್ಛ ವ್ಯಾಪಾರ ಆಡಳಿತಕ್ಕೆ ಬದ್ಧವಾಗಿದ್ದರು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಟಾಟಾ ಗ್ರೂಪ್ ಮತ್ತು ದೇಶಕ್ಕೆ ಒಂದು ಸ್ಥಾನವನ್ನು ಕೊಟ್ಟಿದ್ದಾರೆ. 26/11 ಭಯೋತ್ಪಾದಕ ದಾಳಿಯ ನಂತರ ಅವರ ದೃಢ ನಿರ್ಧಾರ ಮತ್ತು ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ₹1,500 ಕೋಟಿ ಕೊಡುಗೆಗಾಗಿ ಯಾವಾಗಲೂ ಸ್ಮರಣೀಯರು ಎಂದು ಅದು ಹೇಳಿದೆ. ಅವರು ಕೋವಿಡ್ ರೋಗಿಗಳಿಗಾಗಿ ಟಾಟಾ ಗ್ರೂಪ್‌ನ ಎಲ್ಲಾ ಹೋಟೆಲ್‌ಗಳನ್ನು ತೆರೆದಿದ್ದರು ಎಂದೂ ತಿಳಿಸಿದೆ.
ಮಹಾರಾಷ್ಟ್ರದ ಜನರ ಪರವಾಗಿ ಸಚಿವ ಸಂಪುಟವು ಟಾಟಾ ಅವರಿಗೆ ಗೌರವ ಸಲ್ಲಿಸುತ್ತದೆ. ಈ ದುಃಖದ ಕ್ಷಣದಲ್ಲಿ ನಾವು ಟಾಟಾ ಸಮೂಹದ ಜೊತೆ ಇದ್ದೇವೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.