ಮುಂಬೈ: ಮಹಾರಾಷ್ಟ್ರದಲ್ಲಿ ಭಾರಿ ಬಹುಮತ ಪಡೆದಿರುವ ‘ಮಹಾಯುತಿ’ ಮೈತ್ರಿಕೂಟ ಮರಳಿ ಅಧಿಕಾರಕ್ಕೆ ಏರಲಿದೆಯಾದರೂ, ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರವು ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಹೀಗಾಗಿ, ಈ ವಿಚಾರದಲ್ಲಿ ಉದ್ಭವವಾಗಿರುವ ಸಮಸ್ಯೆ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶಿಸಿದ್ದಾರೆ.
ರಾಜ್ಯ ಸರ್ಕಾರವನ್ನು ಯಾರು ಮುನ್ನಡೆಸಬೇಕು ಎಂಬ ಸಮಸ್ಯೆಯನ್ನು ಮುಂದಿನ ಒಂದೆರಡು ದಿನಗಳಲ್ಲಿ ಈ ಇಬ್ಬರು ನಾಯಕರು ಬಗೆಹರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
14ನೇ ಮಹಾರಾಷ್ಟ್ರ ವಿಧಾನಸಭೆ ಅವಧಿಯು ಮಂಗಳವಾರ ಅಂತ್ಯಗೊಂಡಿದೆ. ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್ ಅವರು ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಿಗೆ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ.
ಹೊಸ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ಶಿಂದೆ ಅವರಿಗೆ ರಾಜ್ಯಪಾಲರು ಸೂಚಿಸಿದ್ದಾರೆ.
ಬಿಜೆಪಿ ಸಿದ್ಧ ಇಲ್ಲ: ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಹಾಗೂ ಅದರ ಸೈದ್ಧಾಂತಿಕ ಮಾರ್ಗದರ್ಶಿಯಾಗಿರುವ ಆರ್‌ಎಸ್‌ಎಸ್, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಲು ಸಿದ್ಧ ಇಲ್ಲ.
ಫಡಣವೀಸ್ ಅವರೇ ಮುಖ್ಯಮಂತ್ರಿ ಆಗಬೇಕು ಎಂಬುದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ರಾಜ್ಯ ಘಟಕದ ಬೇಡಿಕೆ. ಮಿತ್ರಪಕ್ಷ ಶಿವಸೇನಾ ಇದಕ್ಕೆ ಒಪ್ಪುತ್ತಿಲ್ಲ.
ಎರಡು ಬಾರಿ ಮುಖ್ಯಮಂತ್ರಿ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದ ಫಡಣವೀಸ್ ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ಒಲವು ಹೊಂದಿದೆ. ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಎಂಬ ನಿಲುವೂ ಅದರದು.
‘ಏಕನಾಥ ಶಿಂದೆ ಅವರೇ ಮಹಾಯುತಿಯ ಪ್ರಚಾರವನ್ನು ಮುನ್ನಡೆಸಿದ್ದು, ಅವರ ‘ಸಾಮಾನ್ಯ ವ್ಯಕ್ತಿ’ ವರ್ಚಸ್ಸು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಕಾರಣ ಅವರೇ ಮುಖ್ಯಮಂತ್ರಿಯಾಗಬೇಕು’ ಎಂದು ಶಿವಸೇನಾ ಪ್ರತಿಪಾದಿಸುತ್ತಿದೆ.
ಮಹಾಯುತಿಯ ಮತ್ತೊಂದು ಅಂಗಪಕ್ಷವಾದ ಎನ್‌ಸಿಪಿ (ಅಜಿತ್ ಪವಾರ್), ಫಡಣವೀಸ್ ಅವರೇ ಮುಖ್ಯಮಂತ್ರಿ ಆಗಬೇಕು ಎಂಬುದಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಈ ಎಲ್ಲ ಬೆಳವಣಿಗೆಗಳ ಕಾರಣ, ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ತಲುಪಿಲ್ಲ.
ಇನ್ನೊಂದೆಡೆ, ‘ದೇವೇಂದ್ರ ಫಡಣವೀಸ್ ಅವರೇ ಮುಖ್ಯಮಂತ್ರಿ ಆಗಬೇಕು. ಇಲ್ಲದಿದ್ದರೆ ಅವರು ಕೇಂದ್ರ ಸಂಪುಟ ಸೇರಬೇಕು’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ ಆಠವಲೆ ಹೇಳಿದ್ದಾರೆ.
ಈ ಮಾತಿಗೆ ಪ್ರತಿಕ್ರಿಯಿಸಿರುವ ಶಿವಸೇನಾ ವಕ್ತಾರ ಸಂಜಯ್ ಶಿರ್ಸಾಟ್,‘ಆಠವಲೆ ಅವರು ತಮಗೆ ಸಂಬಂಧಿಸದ ವಿಚಾರ ಕುರಿತು ಈ ರೀತಿ ಹೇಳಿಕೆ ನೀಡಬಾರದು’ ಎಂದಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಮಹಾಯುತಿ ನಾಯಕರು ಚರ್ಚಿಸಿದ ನಂತರ ದೆಹಲಿಗೆ ತೆರಳುವರು. ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೈಗೊಳ್ಳುವ ನಿರ್ಧಾರ ಒಪ್ಪಿಕೊಳ್ಳುವುದಾಗಿ ಏಕನಾಥ ಶಿಂದೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆದೀಪಕ್ ಕೇಸರಕರ್ ಶಿವಸೇನಾ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.