ADVERTISEMENT

ಮಹಾರಾಷ್ಟ್ರ | ಮುಂದುವರಿದ ಕಗ್ಗಂಟು: ಹೊಸ ಸರ್ಕಾರ ರಚನೆ ವಿಳಂಬ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 0:29 IST
Last Updated 26 ನವೆಂಬರ್ 2024, 0:29 IST
<div class="paragraphs"><p>ದೇವೇಂದ್ರ ಫಡಣವೀಸ್, ಏಕನಾಥ ಶಿಂದೆ ಹಾಗೂ ಅಜಿತ್ ಪವಾರ್ </p></div>

ದೇವೇಂದ್ರ ಫಡಣವೀಸ್, ಏಕನಾಥ ಶಿಂದೆ ಹಾಗೂ ಅಜಿತ್ ಪವಾರ್

   

ಸಂಗ್ರಹ ಚಿತ್ರ (ಪಿಟಿಐ)

ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಯ್ಕೆ ಸಂಬಂಧ ‘ಮಹಾಯುತಿ’ ಮೈತ್ರಿಕೂಟದಲ್ಲಿ ಸೋಮವಾರವೂ ಒಮ್ಮತ ಮೂಡಿಬರದ ಕಾರಣ ಹೊಸ ಸರ್ಕಾರ ರಚನೆ ವಿಳಂಬವಾಗಿದೆ.

ADVERTISEMENT

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದ ‘ಮಹಾಯುತಿ’ ಮೈತ್ರಿಕೂಟದ ನಾಯಕರು ಇಡೀ ದಿನ ಚರ್ಚಿಸಿದರೂ, ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಲಿಲ್ಲ. ಹಾಲಿ ವಿಧಾನಸಭೆಯ ಅವಧಿ ಮಂಗಳವಾರ ಕೊನೆಗೊಳ್ಳಲಿದೆ. ಆದರೆ, ರಾಷ್ಟ್ರಪತಿ ಆಳ್ವಿಕೆಯ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ.

‘ಈಗ ಇರುವ ಸೂತ್ರವೇ ಮುಂದುವರಿಯಲಿದೆ. ಒಬ್ಬರು ಮುಖ್ಯಮಂತ್ರಿ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆ. 12 ಸಚಿವ ಸ್ಥಾನಗಳು ಬಿಜೆಪಿಗೆ ಸಿಗಲಿದೆ. ಶಿವಸೇನೆ (ಶಿಂದೆ ಬಣ) ಮತ್ತು ಎನ್‌ಸಿಪಿಗೆ (ಅಜಿತ್‌ ಪವಾರ್ ಬಣ) ತಲಾ 12 ಹಾಗೂ 10 ಸ್ಥಾನಗಳು ಸಿಗಲಿವೆ’ ಎಂದು ಮೂಲಗಳು ತಿಳಿಸಿವೆ. 

ಆದರೆ, ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಬಿಜೆಪಿ ಅಧಿಕ ಸ್ಥಾನಗಳನ್ನು ಗೆದ್ದಿರುವುದರಿಂದ ದೇವೇಂದ್ರ ಫಡಣವೀಸ್‌ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಕಮಲ ಪಡೆ ಪಟ್ಟುಹಿಡಿದಿದೆ. ಆರ್‌ಎಸ್‌ಎಸ್‌ ಕೂಡಾ ಫಡಣವೀಸ್‌ ಅವರನ್ನು ಬೆಂಬಲಿಸಿದೆ. ಆದರೆ ಶಿವಸೇನೆ (ಶಿಂದೆ ಬಣ), ‘ಹಾಲಿ ಇರುವ ಅಧಿಕಾರ ಹಂಚಿಕೆ ಸೂತ್ರದಂತೆ ಏಕನಾಥ ಶಿಂದೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು’ ಎಂದು ಹೇಳಿದೆ.

ಶಿಂದೆ ಅವರನ್ನು ಮೊದಲ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಮಾಡುವುದಕ್ಕೂ ತಮ್ಮ ಒಪ್ಪಿಗೆಯಿದೆ ಎಂದು ಶಿವಸೇನೆ ಹೇಳಿದೆ. ಆದರೆ, ಬಿಜೆಪಿಯ ಹಿರಿಯ ನಾಯಕರಾದ ಕೇಂದ್ರದ ಮಾಜಿ ಸಚಿವ ರಾವ್‌ಸಾಹೇಬ್‌ ದಾನ್ವೆ ಮತ್ತು ಪ್ರವೀಣ್ ದರೇಕರ್‌ ಅವರು ಇದನ್ನು ತಿರಸ್ಕರಿಸಿದ್ದಾರೆ. 

‘ಮತದಾರರು ಫಡಣವೀಸ್‌ ಅವರಿಗೆ ಜನಾದೇಶ ನೀಡಿದ್ದಾರೆ. ಮಹಾರಾಷ್ಟ್ರದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಪರ ನಿಂತಿದ್ದಾರೆ’ ಎಂದು ದರೇಕರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.