ADVERTISEMENT

'ಮಹಾ' ಬಿಕ್ಕಟ್ಟು | ಮತ್ತೆ ನಾಲ್ವರು ಬಂಡಾಯ ಶಾಸಕರ ಅನರ್ಹತೆ ಕೋರಿದ ಶಿವಸೇನಾ

ಪಿಟಿಐ
Published 25 ಜೂನ್ 2022, 2:14 IST
Last Updated 25 ಜೂನ್ 2022, 2:14 IST
ಅರವಿಂದ ಸಾವಂತ್
ಅರವಿಂದ ಸಾವಂತ್    

ಮುಂಬೈ: ಬಂಡಾಯ ಎದ್ದಿರುವ ಶಿವಸೇನಾದ ಮತ್ತೆ ನಾಲ್ವರು ಶಾಸಕರನ್ನು ಅನರ್ಹಗೊಳಿಸುವ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರದ ವಿಧಾನಸಭೆ ಉಪ ಸ್ಪೀಕರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಸದ, ಶಿವಸೇನಾದ ನಾಯಕ ಅರವಿಂದ ಸಾವಂತ್ ತಿಳಿಸಿದ್ದಾರೆ.

ಬಂಡಾಯ ಗುಂಪಿನ 16 ಶಾಸಕರಿಗೆ ನೋಟಿಸ್ ಜಾರಿ ಮಾಡಲಿದ್ದು, ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಲಾಗಿದೆ ಎಂದು ಸಾವಂತ್ ತಿಳಿಸಿದರು.

ಶಿವಸೇನಾದ ಬಂಡಾಯ ನಾಯಕ ಏಕನಾಥ ಶಿಂಧೆ ಅವರೊಂದಿಗೆ ಗುರುತಿಸಿಕೊಂಡಿರುವ ಸುಮಾರು 12 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಮತ್ತೆ ನಾಲ್ವರು ಶಾಸಕರಾದ ಸಂಜಯ್ ರೇಮುಲ್ಕರ್, ಚಿಮನ್ ಪಾಟೀಲ್, ರಮೇಶ್ ಬೊರ್ನಾರೆ ಮತ್ತು ಬಾಲಾಜಿ ಕಲ್ಯಾಣ್ಕರ್ ಹೆಸರುಗಳನ್ನು ಉಪ ಸ್ಪೀಕರ್‌ಗೆ ಸಲ್ಲಿಸಲಾಗಿದೆಎಂದು ಅವರು ಹೇಳಿದರು.

ಪತ್ರ ರವಾನಿಸಿದರೂ ಪಕ್ಷದ ಶಾಸಕಾಂಗ ಸಭೆಯಲ್ಲಿ ಅವರು ಯಾರೂ ಭಾಗವಹಿಸಲಿಲ್ಲ ಎಂದು ಸಾವಂತ್ ಹೇಳಿದರು.

ಈಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತ್ರ ಬಂಡಾಯ ಶಾಸಕರು ಶಿವಸೇನಾಗೆ ಮರಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಇಲ್ಲವಾದ್ದಲ್ಲಿ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಡುತ್ತದೆ. ಅವರೆಲ್ಲರೂ ಕೇಸರಿ ಧ್ವಜಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.

ಈ ನಡುವೆ ನೋಟಿಸ್ ಸಿಕ್ಕಿದ ತಕ್ಷಣ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಬಂಡಾಯ ಶಾಸಕರು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.