ADVERTISEMENT

ಆದಾಯ ತೆರಿಗೆ ವಂಚನೆ: ಹಲವರ ಆಸ್ತಿಗಳ ಮೇಲೆ ಇ.ಡಿ ದಾಳಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 14:39 IST
Last Updated 13 ಜುಲೈ 2024, 14:39 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ನವದೆಹಲಿ: ಮಹಾರಾಷ್ಟ್ರದಲ್ಲಿನ ₹263 ಕೋಟಿ ಆದಾಯ ತೆರಿಗೆ ರೀಫಂಡ್‌ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಹೊಸದಾಗಿ ದಾಳಿ ನಡೆಸಿದ್ದು, ₹14.02 ಕೋಟಿ ಮೌಲ್ಯದ ಸ್ಥಿರ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

‘ವಂಚನೆ ಪ್ರಕರಣದಲ್ಲಿ ಐ‍ಪಿಎಸ್‌ ಅಧಿಕಾರಿಯೊಬ್ಬರ ಪತಿ ಸೇರಿದಂತೆ ಹಲವರ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಮಾಹಿತಿ ನೀಡಿದೆ.

ಪುರುಷೋತ್ತಮ ಚೌಹಾಣ್‌ ಅವರ ಮುಂಬೈನಲ್ಲಿರುವ ಫ್ಲ್ಯಾಟ್‌, ರಾಜೇಶ್‌ ಬ್ರಿಜ್‌ಲಾಲ್‌ ಬಟ್ರೆಜಾ ಅವರ ನಿವೇಶನಗಳನ್ನು, ಅನಿರುದ್ಧ್‌ ಗಾಂಧಿ ಅವರ ಬ್ಯಾಂಕ್‌ ಖಾತೆಯನ್ನು, ರಾಜೇಶ್‌ ಶೆಟ್ಟಿ ಹಾಗೂ ಭೂಷಣ್‌ ಅನಂತ್‌ ಪಾಟೀಲ್‌ ಅವರ ವಿಮೆಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಪುರುಷೋತ್ತಮ ಚೌಹಾಣ್‌ ಅವರು ಐಪಿಎಸ್‌ ಅಧಿಕಾರಿಯೊಬ್ಬರ ಪತಿಯಾಗಿದ್ದಾರೆ.

ADVERTISEMENT

ಮಾಜಿ ತೆರಿಗೆ ಸಹಾಯಕ ತಾನಾಜಿ ಮಂಡಲ್‌ ಅಧಿಕಾರಿ ಹಾಗೂ ಇತರರ ಮೇಲೆ ಸಿಬಿಐ ಈಗಾಗಲೇ ಎಫ್‌ಐಆರ್‌ ದಾಖಲಿಸಿ, ಚಾರ್ಚ್‌ಶೀಟ್‌ ಅನ್ನೂ ಸಲ್ಲಿಸಿದೆ. ಈಗ ಇದೇ ಪ್ರಕರಣ ಸಂಬಂಧ ನಡೆದಿರುವ ಹಣ ಅಕ್ರಮ ವರ್ಗಾವಣೆಯಲ್ಲಿ ಇ.ಡಿ ದಾಳಿ ನಡೆಸಿದೆ.

‘ರಾಜೇಶ್‌ ಬಟ್ರೆಜಾ ಅವರು ಅನಿರುದ್ಧ್‌ ಗಾಂಧಿ ಅವರ ಸಹಾಯದಿಂದ ತಾನಾಜಿ ಅಧಿಕಾರಿ ಹಾಗೂ ಇತರರ ₹55.50 ಕೋಟಿ ಹಣವನ್ನು ದುಬೈಗೆ ವರ್ಗಾಯಿಸಲು ನೆರವಾಗಿದ್ದಾರೆ. ಜೊತೆಗೆ, ದುಬೈನಿಂದ ಗಡಿಯಾಚೆ ಹಣ ವರ್ಗಾವಣೆ ಪ್ರಕ್ರಿಯೆಯ ಮೂಲಕ ಭಾರತದ ಎರಡು ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಲಾಗಿದೆ’ ಎಂದು ಅಧಿಕಾರಿಗಳು ವಿವರಿಸಿದರು.

ತಾನಾಜಿ ಅಧಿಕಾರಿ, ಪಾಟೀಲ್‌, ಶೆಟ್ಟಿ, ಬಟ್ರಿಜಾ ಹಾಗೂ ಚೌಹಾಣ್‌ ಅವರನ್ನು ಬಂಧಿಸಲಾಗಿದೆ. ಅವರೆಲ್ಲ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಾನಾಜಿ ಅಧಿಕಾರಿ ಹಾಗೂ ಇತರ 10 ಮಂದಿಯ ಮೇಲೆ 2023ರ ಸೆಪ್ಟೆಂಬರ್‌ನಲ್ಲಿಯೇ ಚಾರ್ಚ್‌ಶೀಟ್‌ ದಾಖಲು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.