ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು, ಮತಗಟ್ಟೆಗಳ ಬಳಿ ಚಪ್ಪಲಿಯನ್ನು ನಿಷೇಧಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಕಾರಣ ಏನು?
ಪರಂದ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುದಾಸ್ ಸಂಭಾಜಿ ಕಾಂಬಳೆ ಎಂಬವರು ತಮ್ಮ ಕ್ಷೇತ್ರದ ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಚಪ್ಪಲಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಚಪ್ಪಲಿ ತಮ್ಮ ಚುನಾವಣಾ ಚಿಹ್ನೆಯಾಗಿದ್ದು, ಅದನ್ನು ಧರಿಸುವುದು ಚುನಾವಣಾ ಮಾದರಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆಯ ಪ್ರಕಾರ ಅಭ್ಯರ್ಥಿಗಳು ತಮ್ಮ ಚಿಹ್ನೆಗಳನ್ನು ಮತಗಟ್ಟೆಗಳ ಸಮೀಪ ಪ್ರದರ್ಶಿಸುವಂತಿಲ್ಲ.
'ನನ್ನ ಚುನಾವಣಾ ಚಿಹ್ನೆ ಚಪ್ಪಲಿ ಆಗಿದೆ. ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಚಪ್ಪಲಿ ಧರಿಸಿದರೆ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಇದನ್ನು ತಡೆಗಟ್ಟಲು ಚುನಾವಣಾಧಿಕಾರಿಗಳು, ಅಭ್ಯರ್ಥಿಗಳು, ಮತದಾರರು ಸೇರಿದಂತೆ ಎಲ್ಲರೂ ಚಪ್ಪಲಿ ಹಾಕುವುದನ್ನು ನಿಷೇಧಿಸಬೇಕು ಎಂದು ಗುರುದಾಸ್ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದ್ದು, ನ.23ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.