ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟವು ಹೀನಾಯ ಸೋಲುಂಡಿರುವುದು ಅನಿರೀಕ್ಷಿತ, ಅಚ್ಚರಿ ಹಾಗೂ ವಿವರಣೆಗೆ ನಿಲುಕದ್ದು ಎಂದು ಕಾಂಗ್ರೆಸ್ ಬಣ್ಣಿಸಿದೆ.
ಜಾರ್ಖಂಡ್‌ನಲ್ಲಿ ಮಿತ್ರಕೂಟವು ಗೆಲುವು ಪಡೆದಿದ್ದಕ್ಕೆ ಅಭಿನಂದನೆ ಸಲ್ಲಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರದ ಫಲಿತಾಂಶದ ಕುರಿತು ವಿಸ್ತೃತ ವಿಶ್ಲೇಷಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸೋಲಿನ ಹೊರತಾಗಿಯೂ, ಪಾರದರ್ಶಕವಾಗಿ ಚುನಾವಣೆ ನಡೆಯಬೇಕೆಂಬ ವಿಚಾರದಿಂದ ಪಕ್ಷವು ಹಿಂದೆ ಸರಿಯುವುದಿಲ್ಲ’ ಮುಖಂಡರಾದ ಜೈರಾಮ್ ರಮೇಶ್, ಪವನ್ ಖೇರಾ ತಿಳಿಸಿದ್ದಾರೆ.
‘ಫಲಿತಾಂಶ ‘ಅನಿರೀಕ್ಷಿತ’ವಾಗಿದ್ದು, ಸೋಲಿಗೆ ನೈಜ ಕಾರಣವನ್ನು ತಿಳಿಯಲಾಗುವುದು. ಛತ್ರಪತಿ ಶಿವಾಜಿ, ಶಾಹು ಮಹಾರಾಜ್, ಫುಲೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೈಜ ಸಿದ್ಧಾಂತವನ್ನು ಪ್ರತಿನಿಧಿಸುವ ಮಹಾ ವಿಕಾಸ್ ಆಘಾಡಿಯೂ ಜನರ ವಿಚಾರಗಳಿಗೆ ಸಂಬಂಧಿಸಿದಂತೆ ಮುಂದೆಯೂ ಹೋರಾಟ ನಡೆಸಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಫಲಿತಾಂಶವು ಅನಿರೀಕ್ಷಿತವಾಗಿದ್ದು, ಸೋಲಿನ ಕಾರಣದ ಕುರಿತಂತೆ ಚರ್ಚೆ ನಡೆಸಲಾಗುವುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ಜಾರ್ಖಂಡ್‌ನಲ್ಲಿ ಅಭೂತಪೂರ್ವ ಜಯಗಳಿಸಿದ ಜೆಎಂಎಂ ಮುಖ್ಯಸ್ಥ ಹೇಮಂತ್ ಸೊರೇನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
‘ಈ ಗೆಲುವು ನೀರು, ಅರಣ್ಯ, ಭೂಮಿ ಹಾಗೂ ಸಂವಿಧಾನ ರಕ್ಷಣೆಗೆ ನೀಡಿದ ಗೆಲುವಾಗಿದೆ’ ಎಂದು ತಿಳಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರ (ಇವಿಎಂ) ವಿಶ್ವಾಸಾರ್ಹತೆ ಕುರಿತು ಕಾಂಗ್ರೆಸ್‌ನವರು ಪ್ರಶ್ನೆ ಮಾಡಿದ್ದಾರೆ. ವಿರೋಧ ಪಕ್ಷಗಳು ಗೆಲುವು ಪಡೆದಾಗ ಯಾವುದೇ ಸಮಸ್ಯೆ ಇಲ್ಲಜಿತೇಂದ್ರ ಸಿಂಗ್ ಕೇಂದ್ರ ಸಚಿವ
‘ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿನ ಹಿಂದೆ ‘ದೊಡ್ಡ ಪಿತೂರಿ’ಯಿದ್ದು ಗೆಲುವು ಶಂಕಾಸ್ಪದವಾಗಿದೆ’ ಎಂದು ಶಿವಸೇನಾ (ಯುಬಿಟಿ) ಪಕ್ಷದ ನಾಯಕ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಜನರ ತೀರ್ಪು ಫಲಿತಾಂಶದಲ್ಲಿ ವ್ಯಕ್ತವಾಗಿಲ್ಲ. ತಳಮಟ್ಟದಲ್ಲಿ ಹಾಲಿ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊಂದಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ನಡೆದಿರುವ ಅನುಮಾನವಿದೆ. ಇದು ಮರಾಠಿ ‘ಮನೂಸ್’ ಅಥವಾ ರೈತರು ನೀಡಿದ ತೀರ್ಪಲ್ಲ. ಇದು ಜನರು ನೀಡಿದ ತೀರ್ಪು ಎಂಬುದನ್ನು ನಾವು ಒಪ್ಪುವುದಿಲ್ಲ ಗೆಲುವು ಶಂಕಾಸ್ಪಂದವಾಗಿದೆ’ ಎಂದು ತಿಳಿಸಿದರು. ‘ಈ ಚುನಾವಣೆಯಲ್ಲಿ ಹಣದ ಬಳಕೆ ವ್ಯಾಪಕವಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವ ಪಕ್ಷದ ಎಲ್ಲ ಶಾಸಕರು ಗೆಲ್ಲಲು ಹೇಗೆ ಸಾಧ್ಯ? ದ್ರೋಹವೆಸಗಿದ ಅಜಿತ್ ಪವಾರ್ ಹೇಗೆ ಗೆಲುವು ಪಡೆಯಲು ಸಾಧ್ಯ’ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಅವರೂ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಿಕೊಂಡು ಫಲಿತಾಂಶವನ್ನು ಮಹಾಯುತಿ ತಕ್ಕಂತೆ ಬದಲಿಸಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.