ADVERTISEMENT

Maharashtra Polls |ನೀತಿ ಸಂಹಿತೆ ಉಲ್ಲಂಘನೆ: BJP ನಾಯಕ ತಾವ್ಡೆ ವಿರುದ್ಧ 2 FIR

ಪಿಟಿಐ
Published 20 ನವೆಂಬರ್ 2024, 1:56 IST
Last Updated 20 ನವೆಂಬರ್ 2024, 1:56 IST
ವಿನೋದ್‌ ತಾವ್ಡೆ
ವಿನೋದ್‌ ತಾವ್ಡೆ   

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಪಾಲ್ಘರ್‌ನ ಹೋಟೆಲ್‌ನಲ್ಲಿ ಮತದಾರರಿಗೆ ನಗದು ಹಂಚಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಪಕ್ಷದ ಅಭ್ಯರ್ಥಿ ರಾಜನ್ ನಾಯಕ್ ಮತ್ತು ಇತರರ ವಿರುದ್ಧ ಪೊಲೀಸರು ಮಂಗಳವಾರ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ಬುಧವಾರ) ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿನೋದ್ ತಾವ್ಡೆ ಸೇರಿ ಇತರರ ವಿರುದ್ಧ ಪಾಲ್ಘರ್‌ ಜಿಲ್ಲೆಯ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ತಾವ್ಡೆ ಮತ್ತು ಇತರರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಹೋಟೆಲ್‌ನಲ್ಲಿ ಒಟ್ಟುಗೂಡಿದ್ದಕ್ಕೆ ಸಂಬಂಧಿಸಿ ಮೊದಲ ಎಫ್‌ಐಆರ್‌ ದಾಖಲಿಸಲಾಗಿದೆ. ಮತದಾರರಿಗೆ ನಗದು ಮತ್ತು ಮದ್ಯವನ್ನು ನೀಡುವ ಮೂಲಕ ಆಮಿಷ ಒಡ್ಡಿರುವ ಸಂಬಂಧ ಎರಡನೇ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎರಡೂ ಪ್ರಕರಣಗಳನ್ನು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿನೋದ್ ತಾವ್ಡೆ ಅವರು ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಮತದಾರರಿಗೆ ₹5 ಕೋಟಿ ಹಂಚಿದ್ದಾರೆ ಎಂದು ಬಹುಜನ ವಿಕಾಸ ಆಘಾಡಿ (ಬಿವಿಎ) ಮಂಗಳವಾರ ಆರೋಪಿಸಿತ್ತು.

‘ತಾವ್ಡೆ ಅವರು ಹಣ ಹಂಚುತ್ತಿದ್ದುದನ್ನು ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನೋಡಿದ್ದಾರೆ. ಹಣ ಹಂಚುವಾಗಲೇ ಸಿಕ್ಕಿಬಿದ್ದಿ ದ್ದಾರೆ’ ಎಂದು ಬಿವಿಎ ಮುಖ್ಯಸ್ಥ ಹಿತೇಂದ್ರ ಠಾಕೂರ್ ಮತ್ತು ಅವರ ಪುತ್ರ ಕ್ಷಿತಿಜ್‌ ಠಾಕೂರ್‌ ಹೇಳಿದ್ದರು.

ವಿಧಾನಸಭಾ ಚುನಾವಣೆಯ ಮತದಾನಕ್ಕೆ ಒಂದು ದಿನ ಮುನ್ನ ಕೇಳಿಬಂದ ಈ ಆರೋಪವು ಮಹಾರಾಷ್ಟ್ರದ ರಾಜಕೀಯದಲ್ಲಿ ಭಾರಿ ಸದ್ದು ಉಂಟುಮಾಡಿದೆ. ತಮ್ಮ ವಿರುದ್ಧದ ಆರೋಪವನ್ನು ತಾವ್ಡೆ ಅಲ್ಲಗಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.