ADVERTISEMENT

Maharashtra Elections 2024 | ಮಹಾರಾಷ್ಟ್ರದಲ್ಲಿ ಬಂಡಾಯದ ಬಿಸಿ

ವಿಧಾನಸಭಾ ಚುನಾವಣೆ: ಎಂವಿಎ ಮತ್ತು ಮಹಾಯುತಿ ಮೈತ್ರಿಕೂಟಗಳಿಗೆ ತಲೆಬಿಸಿ

ಪಿಟಿಐ
​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 23:51 IST
Last Updated 30 ಅಕ್ಟೋಬರ್ 2024, 23:51 IST
<div class="paragraphs"><p>ಎಂ‍ಪಿಸಿಸಿ ಅಧ್ಯಕ್ಷ ನಾನಾ ಪಟೋಲೆ ಅವರು&nbsp;ಎಐಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಚೆನ್ನಿತ್ತಲ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. </p></div>

ಎಂ‍ಪಿಸಿಸಿ ಅಧ್ಯಕ್ಷ ನಾನಾ ಪಟೋಲೆ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಚೆನ್ನಿತ್ತಲ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

   

–ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಬಂಡಾಯ ಅಭ್ಯರ್ಥಿಗಳು, ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿ ಇರುವ ಕಾರಣ, ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ನಾಯಕರು ಆಗಬಹುದಾದ ಹಾನಿಯನ್ನು ತಡೆಯಲು ಮುಂದಾಗಿದ್ದಾರೆ.

ADVERTISEMENT

ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ನವೆಂಬರ್ 4ರವರೆಗೆ ಅವಕಾಶ ಇದೆ. ಅದಾದ ನಂತರವೇ ವಿಧಾನಸಭಾ ಚುನಾವಣೆಯ ಕಣದ ಬಗ್ಗೆ ಇನ್ನಷ್ಟು ಸ್ಪಷ್ಟವಾದ ಚಿತ್ರಣವೊಂದು ಸಿಗಲಿದೆ. ನವೆಂಬರ್ 20ರಂದು ನಡೆಯಲಿರುವ ಚುನಾವಣೆಗೆ ಒಟ್ಟು 7,955 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಷ್ಟು ಮಂದಿ ಅಭ್ಯರ್ಥಿಗಳಿಂದ 10,905 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ಮಾಹಿತಿ ಒದಗಿಸಿದೆ. 

ಬಿಜೆಪಿ, ಶಿವಸೇನಾ, ಎನ್‌ಸಿಪಿ ಪಕ್ಷಗಳ ಮಹಾಯುತಿ ಮೈತ್ರಿಕೂಟದ ನಾಯಕರು ಹಾಗೂ ಕಾಂಗ್ರೆಸ್, ಶಿವಸೇನಾ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಮೈತ್ರಿಕೂಟವಾದ ಎಂವಿಎ ನಾಯಕರು ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಈ ನಾಯಕರು ಸರಣಿ ಸಭೆಗಳನ್ನು ಕೂಡ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕರು ಹಾಗೂ ಎಂವಿಎ ಮೈತ್ರಿಕೂಟದ ನಾಯಕರು ಬಂಡಾಯ ಅಭ್ಯರ್ಥಿಗಳ ಜೊತೆ ಮಾತನಾಡಿದ್ದಾರೆ. ನಾಮಪತ್ರ ಹಿಂದಕ್ಕೆ ಪಡೆಯುವಂತೆ ಅವರಿಗೆ ಮನವಿ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.

‘ಬಂಡಾಯ ಅಭ್ಯರ್ಥಿಗಳೆಲ್ಲರೂ ನಾಮಪತ್ರ ಹಿಂಪಡೆಯಲಿದ್ದಾರೆ. ನಮ್ಮ ಮೈತ್ರಿಕೂಟಕ್ಕೆ ಸೇರಿದವರ ನಡುವೆ ಹಣಾಹಣಿ ಇರುವುದಿಲ್ಲ. ನಮ್ಮ ನಾಯಕರಾದ ಬಾಳಾಸಾಹೇಬ್ ಥೋರಟ್, ನಾನಾ ಪಟೋಲೆ ಮತ್ತು ವಿಜಯ್ ವಡೆಟ್ಟೀವಾರ್ ಅವರು ಬಂಡಾಯ ಅಭ್ಯರ್ಥಿಗಳ ಜೊತೆ ಮಾತನಾಡುವರು’ ಎಂದು ಚೆನ್ನಿತ್ತಲ ಹೇಳಿದ್ದಾರೆ. 

ಮಹಾಯುತಿ ನಾಯಕರಾದ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್ ಅವರು ಸಭೆ ನಡೆಸಿ, ಬಂಡಾಯ ಅಭ್ಯರ್ಥಿಗಳ ವಿಚಾರವಾಗಿ ಚರ್ಚಿಸಿದ್ದಾರೆ.

ಸರ್ಕಾರದಲ್ಲಿ ಎಂಎನ್‌ಎಸ್‌ ಭಾಗಿ: ರಾಜ್

ಮುಂಬೈ: ‘ಮುಂದೆ ಬಿಜೆಪಿ ನೇತೃತ್ವದಲ್ಲಿ ಬಿಜೆಪಿಯ ಮುಖ್ಯಮಂತ್ರಿಯ ನೇತೃತ್ವದ ರಚನೆ ಆಗಲಿರುವ ಸರ್ಕಾರದಲ್ಲಿ ಎಂಎನ್‌ಎಸ್‌ ಭಾಗಿಯಾಗಲಿದೆ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ರಾಜ್ ಠಾಕ್ರೆ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ್ದ ಕಾರಣಕ್ಕೆ ಮುಂಬೈನ ಮಾಹಿಂ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ ಅವರ ಮಗ ಅಮಿತ್ ಠಾಕ್ರೆ ಅವರಿಗೆ ಬಿಜೆಪಿ ಬೆಂಬಲ ನೀಡುವುದು ಖಚಿತ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರು ಹೇಳಿದ್ದರು. ಇದಾದ ಕೆಲವೇ ಕ್ಷಣಗಳ ನಂತರ ರಾಜ್ ಠಾಕ್ರೆ ಅವರು ಸರ್ಕಾರದ ಭಾಗವಾಗುವ ಮಾತು ಆಡಿದ್ದಾರೆ. ಫಡಣವೀಸ್ ಅವರು ಕಳೆದ ಐದು ವರ್ಷಗಳಿಂದಲೂ ರಾಕ್ ಠಾಕ್ರೆ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.

ಸ್ಪರ್ಧೆ: ಮುಂಚೂಣಿಯಲ್ಲಿ ಬಿಜೆಪಿ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 148 ಸ್ಥಾನಗಳಲ್ಲಿ ಸೆಣೆಸಲಿದೆ. ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಇರುವ ವಿವಿಧ ಪಕ್ಷಗಳ ಪೈಕಿ ಈ ಬಾರಿ ಅತಿಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಪಕ್ಷ ಬಿಜೆ‍ಪಿ. ಬಿಜೆಪಿಯ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇದೆ. ಈ ಬಾರಿ ಅದು 103 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದೆ. ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಶಿವಸೇನಾ ‍‍‍ಪಕ್ಷವು 80 ಸ್ಥಾನಗಳಲ್ಲಿ ಎನ್‌ಸಿಪಿ 53 ಸ್ಥಾನಗಳಲ್ಲಿ ಕಣಕ್ಕೆ ಇಳಿದಿವೆ. ಮಹಾಯುತಿ ಮೈತ್ರಿಕೂಟದ ಇತರ ಪಕ್ಷಗಳಿಗೆ ಐದು ಸ್ಥಾನ ನೀಡಲಾಗಿದೆ. ಎರಡು ಸ್ಥಾನಗಳ ವಿಚಾರವಾಗಿ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾಗಿಲ್ಲ. ಶಿವಸೇನಾ (ಯುಬಿಟಿ) 89 ಕ್ಷೇತ್ರಗಳಲ್ಲಿ ಎನ್‌ಸಿಪಿ (ಎಸ್‌ಪಿ) 87 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ವಿರೋಧ ಪಕ್ಷಗಳ ಮೈತ್ರಿಕೂಟದ ಇತರ ಪಕ್ಷಗಳಿಗೆ ಆರು ಸ್ಥಾನ ಬಿಟ್ಟುಕೊಡಲಾಗಿದೆ. ಮೂರು ಕ್ಷೇತ್ರಗಳ ವಿಚಾರವಾಗಿ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ನಾಮಪತ್ರ ಹಿಂಪಡೆಯಲು ನವೆಂಬರ್‌ 4ರವರೆಗೆ ಅವಕಾಶ ಇದೆ. ಇಬ್ರಾಹಿಂ ಮಲಿಕ್‌ಗೆ ಬಿಜೆಪಿ ಬೆಂಬಲವಿಲ್ಲ ಮಿತ್ರಪಕ್ಷವಾಗಿರುವ ಎನ್‌ಸಿಪಿಯ ಮಾನಖುರ್ದ್‌–ಶಿವಾಜಿ ನಗರ ಕ್ಷೇತ್ರದ ಅಭ್ಯರ್ಥಿ ನವಾಬ್ ಮಲಿಕ್ ಅವರ ಪರವಾಗಿ ತಾನು ಚುನಾವಣಾ ಪ್ರಚಾರ ನಡೆಸುವುದಿಲ್ಲ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಿದೆ. ಪಾತಕಿ ದಾವೂದ್ ಇಬ್ರಾಹಿಂ ಜೊತೆ ಮಲಿಕ್ ಅವರಿಗೆ ನಂಟು ಇದೆ ಎಂಬ ಆರೋಪವಿರುವ ಕಾರಣಕ್ಕೆ ಅವರ ಪರವಾಗಿ ಪ್ರಚಾರ ನಡೆಸಲು ತನ್ನಿಂದಾಗದು ಎಂದು ಬಿಜೆಪಿ ಹೇಳಿದೆ. ಆದರೆ ಮಲಿಕ್ ಅವರ ಪುತ್ರಿ ಅನುಶಕ್ತಿ ನಗರ ಕ್ಷೇತ್ರದ ಎನ್‌ಸಿಪಿ ಅಭ್ಯರ್ಥಿ ಸನಾ ಮಲಿಕ್ ಪರವಾಗಿ ಪ್ರಚಾರ ನಡೆಸಲು ತಾನು ಸಿದ್ಧ ಎಂದು ಬಿಜೆಪಿ ಹೇಳಿದೆ. ‘ಬಂಡಾಯ ಶಮನ’: ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿರುವ ಶೇಕಡ 90ರಷ್ಟು ಮಂದಿಯನ್ನು ಸಮಾಧಾನಪ‍ಡಿಸುವಲ್ಲಿ ಎಂವಿಎ ಯಶಸ್ವಿಯಾಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.