ಗಡ್ಚಿರೋಲಿ: ಬಹುಕೋಟಿ ವೆಚ್ಚದ ಧಾರಾವಿ ಅಭಿವೃದ್ಧಿ ಯೋಜನೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ರಾಹುಲ್ ಗಾಂಧಿ ಒಬ್ಬ ಬಡವರ ವಿರೋಧಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮರಾವತಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಬಿಜೆಪಿಗರು ಕೋಟ್ಯಂತರ ರೂಪಾಯಿ ಮೌಲ್ಯದ ಧಾರಾವಿ ಅಭಿವೃದ್ಧಿ ಅಭಿವೃದ್ಧಿ ಯೋಜನೆಗೆ ಗುರುತಿಸಲಾದ ಜಾಗವನ್ನು ಉದ್ಯಮಿ ಗೌತಮ್ ಅದಾನಿಗೆ ಹಸ್ತಾಂತರಿಸಿದ್ದಾರೆ’ ಎಂದು ಆರೋಪಿಸಿದ್ದರು.
ರಾಹುಲ್ ಆರೋಪಕ್ಕೆ ತಿರುಗೇಟು ನೀಡಿರುವ ಫಡಣವೀಸ್, ‘ರಾಹುಲ್ ಗಾಂಧಿ ಬಡವರ ವಿರೋಧಿಯಾಗಿದ್ದಾರೆ. ಧಾರಾವಿ ಅಭಿವೃದ್ಧಿ ಯೋಜನೆಯಡಿ ಬಡವರಿಗೆ ಮನೆ ಸಿಗುವುದು ಅವರಿಗೆ ಇಷ್ಟವಿಲ್ಲ. ರಾಜೀವ್ ಗಾಂಧಿ ಅವರು ಧಾರಾವಿಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ನಂತರ 25 ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದವರೇ ಅಧಿಕಾರದಲ್ಲಿದ್ದರು. ಆದರೆ, ಯಾವುದೇ ಕೆಲಸ ಮಾಡಲಿಲ್ಲ’ ಎಂದು ಹೇಳಿದ್ದಾರೆ.
ಬಡವರು ಬಡವರಾಗಿಯೇ ಇರಬೇಕು ಎಂದು ಕಾಂಗ್ರೆಸ್ ಬಯಸಿದೆ ಎಂದು ರಾಹುಲ್ ವಿರುದ್ಧ ಫಡಣವೀಸ್ ದೂರಿದ್ದಾರೆ.
‘ಧಾರಾವಿ ಜಾಗವನ್ನು ಅದಾನಿ ಅವರಿಗೆ ಹಸ್ತಾಂತರಿಸಿಲ್ಲ. ಅದನ್ನು ಧಾರಾವಿ ಪುನರಾಭಿವೃದ್ಧಿ ಯೋಜನೆಗೆ (ಡಿಆರ್‌ಪಿ) ನೀಡಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರವೂ ಪಾಲುದಾರಿಕೆ ಹೊಂದಿದೆ. ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿದೆ. ಉದ್ಧವ್ ಠಾಕ್ರೆ ಅವರೇ ಟೆಂಡರ್ ಷರತ್ತುಗಳನ್ನು ನಿರ್ಧರಿಸಿದ್ದಾರೆ’ ಎಂದು ಫಡಣವೀಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.