ADVERTISEMENT

Maharashtra Elections: ಮಹಾ ವಿಕಾಸ್ ಅಘಾಡಿ ನಡುವೆ 85–85–85 ಸೀಟು ಹಂಚಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:13 IST
Last Updated 23 ಅಕ್ಟೋಬರ್ 2024, 16:13 IST
<div class="paragraphs"><p>ಪತ್ರಿಕಾಗೋಷ್ಠಿಯಲ್ಲಿ ಎಂವಿಎ ನಾಯಕರು</p></div>

ಪತ್ರಿಕಾಗೋಷ್ಠಿಯಲ್ಲಿ ಎಂವಿಎ ನಾಯಕರು

   

– ಪಿಟಿಐ ಚಿತ್ರ

ಮುಂಬೈ: ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯಲ್ಲಿ 85-85-85 ಸ್ಥಾನಗಳ ಒಮ್ಮತದ ಸೂತ್ರಕ್ಕೆ ಬರುವಲ್ಲಿ ಬುಧವಾರ ಯಶಸ್ವಿಯಾಗಿದೆ. ಆದರೆ ಇನ್ನೂ 15 ಸ್ಥಾನಗಳಿಗೆ ಚರ್ಚೆ ಮುಂದುವರಿದಿದೆ.

ADVERTISEMENT

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಲ್ಲಿ, ಎಂವಿಎ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳಾದ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಒಟ್ಟು 270 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಅಲ್ಲದೆ, 18 ಸ್ಥಾನಗಳನ್ನು ಮೈತ್ರಿಕೂಟದಲ್ಲಿನ ಇತರ ಸಣ್ಣ ಪಕ್ಷಗಳಿಗೆ ಎಂವಿಎ ಹಂಚಿಕೆ ಮಾಡಿದೆ. 

ಹಲವು ದಿನಗಳ ಗೊಂದಲ, ವಾಕ್ಸಮರ, ತಿಕ್ಕಾಟದ ನಂತರ ಎಂವಿಎ ಈ ತೀರ್ಮಾನಕ್ಕೆ ಬಂದಿದೆ. ಆಗಿರುವ ಸೀಟು ಹಂಚಿಕೆ ಸೂತ್ರವು ಒಟ್ಟು 255 ಸ್ಥಾನಗಳನ್ನು ಒಳಗೊಂಡಿದೆ. ಉಳಿದ 15 ಸ್ಥಾನಗಳ ಕುರಿತು ಗುರುವಾರ ನಿರ್ಧಾರವಾಗಲಿದೆ.

ಮೈತ್ರಿಕೂಟವು ಸೀಟು ಹಂಚಿಕೆ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಮತ್ತು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. 

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಚೆನ್ನಿತ್ತಲ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಅವರಿಗೆ ಶರದ್‌ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರನ್ನು ಖುದ್ದು ಭೇಟಿ ಮಾಡುವಂತೆ ಸೂಚಿಸಿದ ಒಂದೆರಡು ದಿನಗಳಲ್ಲೇ ಒಮ್ಮತದ ಮೂಲಕ ಸೀಟು ಹಂಚಿಕೆ ಸೂತ್ರ ರೂಪಿಸಲಾಗಿದೆ. ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಕೂಡ ಪವಾರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದರು.

ಕಳೆದ ಎರಡು ತಿಂಗಳಿಂದ ಮಾತುಕತೆಗಳು ಹಲವು ಬಾರಿ ಮುರಿದು ಬೀಳುವ ಹಂತ ತಲುಪಿದ್ದವು. ಆದಾಗ್ಯೂ ಎಂವಿಎ ಪ್ರಮುಖ ರೂವಾರಿ ಶರದ್‌ ಪವಾರ್ ಅವರು ಮಧ್ಯಪ್ರವೇಶಿಸಿ, ಎಲ್ಲರೂ ಒಗ್ಗಟ್ಟಾಗಿ ಹೋಗಬೇಕಿರುವ ಅಂಶವನ್ನು ಮನದಟ್ಟು ಮಾಡಿಸಿ, ಸೀಟು ಹಂಚಿಕೆಯಲ್ಲಿ  ಒಮ್ಮತಕ್ಕೆ ಬರುವಂತೆ ಮಾಡಿದ್ದಾರೆ.

‘ನಾವು 85-85-85 ಸೂತ್ರದ ಪ್ರಕಾರ ಸೀಟುಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇವೆ. ಉಳಿದ 15 ಸ್ಥಾನಗಳಿಗೆ ನಮ್ಮ ಮೈತ್ರಿ ಪಾಲುದಾರರೊಂದಿಗೆ ಚರ್ಚೆ ನಡೆಸಲು ಬಯಸಿದ್ದೇವೆ. ಅದು ಕೂಡ ಒಂದು ದಿನದಲ್ಲಿ ನಿರ್ಧಾರವಾಗಲಿದೆ. ಮೈತ್ರಿಕೂಟದಲ್ಲಿನ ಸಣ್ಣ ಪಕ್ಷಗಳಿಗೆ 18 ಸ್ಥಾನಗಳನ್ನು ನೀಡಲು ನಿರ್ಧರಿಸಿದ್ದೇವೆ’ ಎಂದು ಪಟೋಲೆ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.