ADVERTISEMENT

ಬೈಡನ್‌ರಂತೆ ಮೋದಿ ಕೂಡ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಲೇವಡಿ

ಮೃತ್ಯುಂಜಯ ಬೋಸ್
Published 16 ನವೆಂಬರ್ 2024, 9:45 IST
Last Updated 16 ನವೆಂಬರ್ 2024, 9:45 IST
<div class="paragraphs"><p>ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ </p></div>

ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ

   

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಂತೆ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದು, ಕಾಂಗ್ರೆಸ್‌ನವರು ಪ್ರಸ್ತಾಪಿಸುತ್ತಿರುವ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನನ್ನ ಸಹೋದರಿ (ಪ್ರಿಯಾಂಕಾ ಗಾಂಧಿ) ಅವರು ಚುನಾವಣಾ ಪ್ರಚಾರದ ವೇಳೆ ಪ್ರಸ್ತಾಪಿಸುತ್ತಿರುವ ವಿಷಯದ ಬಗ್ಗೆಯೇ ಪ್ರಧಾನಿ ಮೋದಿ ಅವರು ಕೂಡಾ ಮಾತನಾಡುತ್ತಿದ್ದಾರೆ ಎಂದು ನನಗೆ ಹೇಳಿರುವುದಾಗಿ ತಿಳಿಸಿದ್ದಾರೆ.

ADVERTISEMENT

‘ಸಂಸತ್ತಿನಲ್ಲಿ ನಾನು ಮಾತನಾಡುವ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಡ ಅಧಿಕಾರಕ್ಕೆ ಬಂದರೇ ಜಾತಿ ಗಣತಿ ನಡೆಸಲಾಗುವುದು ಮತ್ತು ಮೀಸಲಾತಿ ಮೇಲಿನ ಶೇಕಡಾ 50ರ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಹೇಳಿದ್ದೆ. ಆದರೆ, ಈಗ ಚುನಾವಣಾ ರ‍್ಯಾಲಿಗಳಲ್ಲಿ ಮೋದಿಯವರು ನನ್ನನ್ನು ‘ಮೀಸಲಾತಿ ವಿರೋಧಿ’ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲೇ ‘ಜಾತಿ ಗಣತಿ’ ವಿರೋಧಿ ಎಂದೂ ಹೇಳಬಹುದು’ ಎಂದು ರಾಹುಲ್‌ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಂತೆ ನೆನಪಿನ ಶಕ್ತಿ ಕಳೆದುಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳುವ ಮೂಲಕ ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಬೈಡನ್‌ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಂದು ಉಲ್ಲೇಖಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮೋದಿ ಅವರು ಜಾತಿ ಗಣತಿಗೆ ವಿರೋಧಿಯಾಗಿದ್ದಾರೆ. ಇಲ್ಲದಿದ್ದಲ್ಲಿ 5ರಿಂದ 7 ವರ್ಷಗಳ ಹಿಂದೆಯೇ ಇದರ ಬಗ್ಗೆ ಮಾಡುತ್ತಿದ್ದರು ಎಂದು ರಾಹುಲ್‌ ಗುಡುಗಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ 20ರಂದು ಮತದಾನ ನಡೆಯಲಿದೆ. ಮೂರು ದಿನಗಳ ಬಳಿಕ (ನವೆಂಬರ್‌ 23ರಂದು) ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.