ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ ‘ಏಕ್ ಹೈ ತೋ ಸೇಫ್ ಹೈ’(ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ) ಘೋಷಣೆ ಮತ್ತು ಅದಾನಿ ಸಮೂಹಕ್ಕೆ ಗುತ್ತಿಗೆ ನೀಡಿರುವ ಧಾರಾವಿ ಮರು ಅಭಿವೃದ್ಧಿ ಯೋಜನೆಯನ್ನು ತುಲನೆ ಮಾಡಿ, ಲೋಕಸಭಾ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಲೇವಡಿ ಮಾಡಿದರು.
ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿಯವರ ಚಿತ್ರ ಹಾಗೂ ‘ಏಕ್ ಹೈ ತೋ ಸೇಫ್ ಹೈ’(ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ) ಘೋಷಣೆ ಇರುವ ಭಿತ್ತಿ ಫಲಕ ಮತ್ತು ಧಾರವಿ ಯೋಜನೆಯ ನಕ್ಷೆ ಇರುವ ಇನ್ನೊಂದು ಭಿತ್ತಿಫಲಕವನ್ನು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
‘ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ಕೋಟ್ಯಧಿಪತಿಗಳು ಮತ್ತು ಬಡಜನರ ನಡುವಿನ ಸ್ಪರ್ಧೆಯಾಗಿದೆ. ಮಹಾ ವಿಕಾಸ್ ಆಘಾಡಿಯು ರೈತರಿಗೆ, ಸಂಕಷ್ಟದಲ್ಲಿರುವವರಿಗೆ ಮತ್ತು ನಿರುದ್ಯೋಗಿಗಳಿಗೆ ಆದ್ಯತೆ ನೀಡಲಿದೆ. ಧಾರವಿ ಮರು ಅಭಿವೃದ್ಧಿ ಯೋಜನೆ ಮೂಲಕ ಅದಾನಿ ಒಂದು ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಕೊಳ್ಳೆ ಹೊಡೆಯಲು ‘ಏಕ್ ಹೈ ತೋ ಸೇಫ್ ಹೈ’ ಘೋಷಣೆ ಪ್ರೇರಣೆ ನೀಡುತ್ತದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದರು.
‘ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ ಎಂದು ಮೋದಿ ಹೇಳುತ್ತಾರೆ. ನಿಜವಾಗಿಯೂ ಯಾರು ಸುರಕ್ಷಿತವಾಗಿರುತ್ತಾರೆ ಎನ್ನುವುದು ನಮ್ಮ ಪ್ರಶ್ನೆಯಾಗಿದೆ’ ಎಂದರು.
‘ಅದಾನಿ ಅವರ ಹಿತಾಸಕ್ತಿಯನ್ನು ಕಾಪಾಡಲು ಧಾರಾವಿ ಮರು ಅಭಿವೃದ್ಧಿ ಯೋಜನೆಯ ಗುತ್ತಿಗೆ ಪ್ರಕ್ರಿಯೆಯನ್ನು ನಡೆಸಲಾಗಿದೆ. ಕೈಗಾರಿಕೋದ್ಯಮಿಗಳ ಹಿತಾಸಕ್ತಿಗಾಗಿ ಧಾರಾವಿ ನಿವಾಸಿಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರದ ಪರವಾಗಿರುವ ಉದ್ಯಮಿಗಳಿಗೆ ಗುತ್ತಿಗೆಗಳನ್ನು ವರ್ಗಾಯಿಸುವಂತೆ ಇತರ ಉದ್ಯಮಿಗಳಿಗೆ ಕೇಂದ್ರ ತನಿಖಾ ಸಂಸ್ಥೆಗಳು ಒತ್ತಡ ಹೇರುತ್ತಿವೆ’ ಎಂದು ಆರೋಪಿಸಿದ್ದಾರೆ.
‘ಮಹಾ ವಿಕಾಸ್ ಆಘಾಡಿ ಮತ್ತು ಕಾಂಗ್ರೆಸ್ ಧಾರಾವಿಯ ಬಡಜನರಿಗೆ ಅವರ ಹಕ್ಕಿನ ಭೂಮಿಯನ್ನು ಹಿಂತಿರುಗಿಸುತ್ತದೆ’ ಎಂದು ಭರವಸೆ ನೀಡಿದರು.
ಮೀಸಲಾಗಿರುವ ಶೇ 50ರ ಮಿತಿಯನ್ನು ರದ್ದುಗೊಳಿಸಲು ಮತ್ತು ಜಾತಿಗಣತಿ ನಡೆಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜಾತಿಗಣತಿ ನಮ್ಮ ಮುಂದಿರುವ ಗಂಭೀರ ವಿಚಾರ ಮತ್ತು ನಾವು ಅದರ ಅನುಷ್ಠಾನ ನಿಶ್ಚಿತ. ಜಾತಿಗಣತಿ ನಮ್ಮ ಆಧಾರಸ್ತಂಭ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.