ನಾಗಪುರ: ರೈತರ ₹2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಶನಿವಾರ ಘೋಷಿಸಿದೆ.
ಇಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಘೋಷಣೆ ಮಾಡಿದರು.
‘ರೈತರಿಗೆ ನೆರವಾಗುವ ಈ ಯೋಜನೆಯನ್ನು ಮಹಾತ್ಮ ಜ್ಯೋತಿರಾವ್ ಫುಲೆ ಸಾಲ ಮನ್ನಾ ಯೋಜನೆ ಎಂದು ಕರೆಯಲಾಗುವುದು. ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ರೈತರಿಗೆ ವಿಶೇಷ ಯೋಜನೆ ರೂಪಿಸಲಾಗುವುದು’ ಎಂದು ಠಾಕ್ರೆ ಸದನದಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಕಚೇರಿ: ‘ರಾಜ್ಯದ ಎಲ್ಲ ವಿಭಾಗಮಟ್ಟದಲ್ಲಿ ಮುಖ್ಯಮಂತ್ರಿ ಕಚೇರಿಗಳನ್ನು ತೆರೆಯಲಾಗುವುದು. ಇದರಿಂದ, ಸರ್ಕಾರದ ಕೆಲಸಕ್ಕೆ ನಾಗರಿಕರು ಮುಂಬೈಗೆ ಬರುವುದು ತಪ್ಪುತ್ತದೆ. ಈ ಕಚೇರಿಗಳು ಮುಂಬೈನಲ್ಲಿರುವ ಸಚಿವಾಲಯದ ಜತೆ ಸಂಪರ್ಕದಲ್ಲಿರುತ್ತವೆ. ಇದು ವಿಕೇಂದ್ರೀಕರಣದ ಭಾಗವಾಗಿದೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.
₹10ಕ್ಕೆ ಊಟ: ಮಹಾರಾಷ್ಟ್ರದಲ್ಲೂ ಬಡವರಿಗಾಗಿ ₹10 ದರದಲ್ಲಿ ಊಟದ ಯೋಜನೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಕಟಿಸಿದ್ದಾರೆ.
ಈ ಯೋಜನೆಗೆ ‘ಶಿವ ಭೋಜನ’ ಎಂದು ಕರೆಯಲಾಗುವುದು. ಮೊದಲು ಪ್ರಾಯೋಗಿಕವಾಗಿ ಮಹಾರಾಷ್ಟ್ರದ 50 ಸ್ಥಳಗಳಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.