ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ರಾಜಕಾರಣ ಸೋಮವಾರ ದೆಹಲಿಗೆ ಸ್ಥಳಾಂತರಗೊಂಡಿತ್ತು. ಮುಖ್ಯಮಂತ್ರಿ ದೇವೇಂದ್ರ ಪಡಣವೀಸ್ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರನ್ನು ಭೇಟಿಯಾಗಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಿದರು.
ವಿಧಾನಸಭೆ ಚುನಾವಣೆ ಫಲಿತಾಂಶ ಪ‍್ರಕಟವಾಗಿ 11 ದಿನಗಳು ಕಳೆದರೂ ಸರ್ಕಾರ ರಚನೆ ಬಗ್ಗೆ ಯಾವುದೇ ಸ್ಪಷ್ಟತೆ ಮೂಡಿಲ್ಲ.
ಮಹಾರಾಷ್ಟ್ರದಲ್ಲಿ ಶೀಘ್ರವೇ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಶಾ ಅವರನ್ನು ಭೇಟಿಯಾದ ಬಳಿಕ ಫಡಣವೀಸ್ ಹೇಳಿದ್ದಾರೆ. ಆದರೆ, ಹೊಸ ಸರ್ಕಾರದಲ್ಲಿ ಶಿವಸೇನಾ ಇರಲಿದೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ರಾವುತ್ ಬೇತಾಳ:ಆರ್‌ಎಸ್‌ಎಸ್ ಪರ ಒಲವು ಹೊಂದಿರುವ ಮರಾಠಿ ಪತ್ರಿಕೆ ತರುಣ್ ಭಾರತ್, ರಾವುತ್ ಅವರನ್ನು ಬೇತಾಳಕ್ಕೆ ಹೋಲಿಸಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ–ಸೇನಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದನ್ನು ರಾವುತ್ ತಡೆಯುತ್ತಿದ್ದಾರೆ. ಬಾಳಾ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದ ಅಧಿಕಾರ ಕಿತ್ತುಕೊಳ್ಳುವುದಕ್ಕಾಗಿ ತಮ್ಮ ಜೀವಮಾನವಿಡೀ ಶ್ರಮಿಸಿದ್ದರು. ಆದರೆ, ಈ ಬೇತಾಳ ಈಗ ಠಾಕ್ರೆ ಅವರ ಕನಸನ್ನು ನುಚ್ಚುನೂರು ಮಾಡಲು ಯತ್ನಿಸುತ್ತಿದೆ ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಮತ್ತೆ ಚುನಾವಣೆ?: ಮರು ಚುನಾವಣೆಗೆ ಹೋಗುವುದೇ ಉತ್ತಮ ಎಂಬ ಅಭಿಪ್ರಾಯ ಮುಖಂಡರಲ್ಲಿ ಇದೆ ಎಂದು ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್ ಹೇಳಿದ್ದಾರೆ.
ಭವಿಷ್ಯದ ಬಗ್ಗೆ ಈಗ ಹೇಳಲಾಗದು: ಶರದ್ ಪವಾರ್
ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಜವಾಬ್ದಾರಿ ಬಿಜೆಪಿಯದ್ದು ಎಂದು ಶರದ್ ಪವಾರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬಳಿಕ ಹೇಳಿದ್ದಾರೆ.
ಸರ್ಕಾರ ರಚನೆಗಾಗಿ ಎನ್‌ಸಿಪಿ ಜತೆಗೆ ಶಿವಸೇನಾ ಸಂಪರ್ಕದಲ್ಲಿದೆ ಎಂಬ ಸುದ್ದಿ ದಟ್ಟವಾಗಿದೆ. ಆದರೆ, ಸೇನಾ ತಮ್ಮ ಬೆಂಬಲ ಕೋರಿಲ್ಲ ಎಂದು ಪವಾರ್ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಭವಿಷ್ಯದಲ್ಲಿ ಏನಾಗಬಹುದು ಎಂಬುದನ್ನು ತಾವು ಹೇಳಲು ಆಗದು ಎಂದೂ ಹೇಳಿದ್ದಾರೆ.
ಸೋನಿಯಾ–ಪವಾರ್ ಅವರು ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಸಖ್ಯದಿಂದ ಸೇನಾ ದೂರವಾದರೆ ಸರ್ಕಾರ ರಚನೆಗೆ ಸೇನಾಕ್ಕೆ ಬೆಂಬಲ ಕೊಡುವ ಬಗ್ಗೆ ನಾಯಕರಿಬ್ಬರು ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.ತಾವು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇಲ್ಲ ಎಂಬುದನ್ನು ಪವಾರ್ ಸ್ಪಷ್ಟವಾಗಿ ಹೇಳಿದ್ದಾರೆ.
ಬಿಜೆಪಿ–ಸೇನಾ ನಡುವೆ ಚೌಕಾಸಿ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, ‘ಆ ಎರಡು ಪಕ್ಷಗಳ ನಡುವಣ ವಿಚಾರ ಗಂಭೀರ’ ಎಂದು ಹೇಳಿದರು.
**
ಎನ್‌ಸಿಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು ಎಂಬುದು ಜನಾದೇಶ. ಆದರೆ, ಭವಿಷ್ಯದ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ.
-ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.