ADVERTISEMENT

‘ಮಹಾ’ ಸರ್ಕಾರ ರಚನೆ ಬಗ್ಗೆ ಮಾತುಕತೆ ನಡೆಸಿಲ್ಲ: ಸೋನಿಯಾ ಭೇಟಿ ಬಳಿಕ ಶರದ್ ಪವಾರ್

ಏಜೆನ್ಸೀಸ್
Published 18 ನವೆಂಬರ್ 2019, 14:01 IST
Last Updated 18 ನವೆಂಬರ್ 2019, 14:01 IST
ಶರದ್ ಪವಾರ್ (ಎಎನ್‌ಐ ಚಿತ್ರ)
ಶರದ್ ಪವಾರ್ (ಎಎನ್‌ಐ ಚಿತ್ರ)   

ನವದೆಹಲಿ:ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಚರ್ಚಿಸಿಲ್ಲ ಎಂದುನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ವರಿಷ್ಠ ಶರದ್ ಪವಾರ್ ಹೇಳಿದರು.

ಸೋಮವಾರ ಸಂಜೆ ಸೋನಿಯಾ ಅವರನ್ನು ಭೇಟಿಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪವಾರ್, ‘ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಮತ್ತು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿಲ್ಲ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ಸಂಖ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ. ಸ್ವಾಭಿಮಾನಿ ಶೇತ್ಕಾರಿ ಸಂಘಟನೆಯೂ ನಮ್ಮ ಜತೆಗಿದೆ. ಅವರ ಅಭ್ಯರ್ಥಿಯೂ ಶಾಸಕರಾಗಿದ್ದಾರೆ. ಅವರನ್ನು ನಾವು ಕಡೆಗಣಿಸುವಂತಿಲ್ಲ. ಎಸ್‌ಪಿಗೂ ಕೆಲವು ಸೀಟುಗಳನ್ನು ಬಿಟ್ಟುಕೊಟ್ಟಿದ್ದೆವು. ಅವರ ಅಭ್ಯರ್ಥಿಗಳೂ ಗೆಲುವು ಸಾಧಿಸಿದ್ದಾರೆ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಯಾರ ಜತೆ ಸೇರುವ ಬಗ್ಗೆಯೂ ಚರ್ಚೆ ನಡೆಸಿಲ್ಲ’ ಎಂದು ಹೇಳಿದ್ದಾರೆ.

‘ನಮ್ಮೊಳಗೆ ನಾವು ಚರ್ಚೆ ನಡೆಸಬೇಕಿದೆ. ಬಿಜೆಪಿ ಏನು ಮಾಡಬೇಕು ಎಂಬುದು ಅದರ ಹಕ್ಕು. ನಮಗೆ ಆರು ತಿಂಗಳು ಸಮಯವಿದೆ. ಶಿವಸೇನಾ ಹೇಗೆ 170 ಶಾಸಕರ ಬೆಂಬಲ ಪಡೆಯಲಿದೆ ಎನ್ನುವುದೂ ಗೊತ್ತಿಲ್ಲ’ ಎಂದೂ ಪವಾರ್ ಹೇಳಿದ್ದಾರೆ.

‘ಬೇರೆ ವಿಷಯಗಳ ಬಗ್ಗೆ ನಾವು ಚರ್ಚಿಸಿಲ್ಲ. ಸದ್ಯದ ಪರಿಸ್ಥಿತಿ ಮೇಲೆ ಕಣ್ಣಿಟ್ಟಿರಲಿದ್ದೇವೆ. ಉಭಯ ಪಕ್ಷಗಳ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದೇವೆ ಮತ್ತು ಅವರ ಅಭಿಪ್ರಾಯ ಕೇಳಲಿದ್ದೇವೆ. ಅದರ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಮಧ್ಯಾಹ್ನಸಂಸತ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಪವಾರ್,‘ಬಿಜೆಪಿ–ಶಿವಸೇನಾ ಚುನಾವಣೆಯಲ್ಲಿ ಜತೆಯಾಗಿ ಸ್ಪರ್ಧಿಸಿವೆ. ಎನ್‌ಸಿಪಿ–ಕಾಂಗ್ರೆಸ್ ಜತೆಯಾಗಿ ಸ್ಪರ್ಧಿಸಿದ್ದೇವೆ. ಹೀಗಾಗಿ ಅವರ ದಾರಿ ಅವರು ನೋಡಿಕೊಳ್ಳಲಿ. ನಮ್ಮ ರಾಜಕೀಯ ನಾವು ಮಾಡುತ್ತೇವೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.