ADVERTISEMENT

ಮಹಾರಾಷ್ಟ್ರ ರಾಜ್ಯಪಾಲರ ವಜಾಕ್ಕೆ ಹೆಚ್ಚಿದ ಒತ್ತಡ: ಬಿಜೆಪಿ ನಾಯಕರಿಂದ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 14:44 IST
Last Updated 24 ನವೆಂಬರ್ 2022, 14:44 IST
ಭಗತ್‌ಸಿಂಗ್ ಕೋಶಿಯಾರಿ
ಭಗತ್‌ಸಿಂಗ್ ಕೋಶಿಯಾರಿ   

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ನೀಡಿದ ಹೇಳಿಕೆಯು ವಿವಾದದ ಸ್ವರೂಪ ಪಡೆದ ಬೆನ್ನಲ್ಲೇ, ಕೋಶಿಯಾರಿ ಅವರನ್ನು ರಾಜ್ಯಪಾಲರ ಸ್ಥಾನದಿಂದ ಕೆಳಗಿಳಿಸುವಂತೆ ಕೇಂದ್ರ ಸರ್ಕಾರ ಮೇಲೆ ಒತ್ತಡ ಹೆಚ್ಚುತ್ತಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಹಾಗೂ ಶಿವಸೇನಾದ ಉದ್ಧವ್‌ ಠಾಕ್ರೆ ಅವರು ಕೋಶಿಯಾರಿ ಅವರನ್ನು ವಜಾ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ರಾಜ್ಯಪಾಲರ ಸಮರ್ಥನೆ: ಕೋಶಿಯಾರಿ ಅವರ ಹೇಳಿಕೆಯು ಏಕನಾಥ ಶಿಂದೆ– ದೇವೇಂದ್ರ ಫಡಣವೀಸ್‌ ಅವರ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ಮುಖ್ಯಮಂತ್ರಿ ಶಿಂದೆ ಅವರು ಈ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಉಪಮುಖ್ಯಮಂತ್ರಿ ಫಡಣವೀಸ್‌ ಅವರು ಕೋಶಿಯಾರಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಬಿಜೆಪಿ ನಾಯಕರು ಕೋಶಿಯಾರಿ ಅವರ ಪರ ಹೇಳಿಕೆ ನೀಡುತ್ತಿರುವುದಕ್ಕೆ ಪವಾರ್ ಹಾಗೂ ಉದ್ಧವ್‌ ಠಾಕ್ರೆ ಗುರುವಾರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ: ‘ಈ ಸ್ಯಾಂಪಲ್‌ (ಕೋಶಿಯಾರಿ) ಅನ್ನು ಕೇಂದ್ರ ವಾಪಸ್ ಕರೆಸಿಕೊಳ್ಳಬೇಕು. ಎಲ್ಲಾ ಮಹಾರಾಷ್ಟ್ರ ಪ್ರೇಮಿಗಳು ಸೇರಿ, ಇನ್ನು ಎರಡು ಮೂರು ದಿನಗಳಲ್ಲಿ ರಾಜ್ಯಪಾಲರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲು ಯೋಜಿಸಬೇಕು. ಕೋಶಿಯಾರಿ ಅವರು ಶಿವಾಜಿ, ಜ್ಯೋತಿಬಾ ಫುಲೆ, ಸಾವಿತ್ರಿಭಾಯಿ ಫುಲೆ ಮತ್ತು ಎಲ್ಲಾ ಮರಾಠಿಗರ ಮೇಲೆ ನಿರಂತರವಾಗಿ ಅವಮಾನಿಸುತ್ತಿದ್ದಾರೆ’ ಎಂದು ಉದ್ಧವ್‌ ಠಾಕ್ರೆ ಹೇಳಿದರು.

‘ಕೋಶಿಯಾರಿ ಅವರು ಎಲ್ಲಾ ಮಿತಿಗಳನ್ನು ಮೀರಿದ್ದಾರೆ’ ಎಂದು ಶರದ್‌ ಪವಾರ್‌ ಹೇಳಿದ್ದಾರೆ. ‘ಬೇಜವಾಬ್ದಾರಿ ಹೇಳಿಕೆ ನೀಡುವ ಇಂಥ ವ್ಯಕ್ತಿಗಳಗೆ ದೊಡ್ಡ ಹುದ್ದೆಗಳನ್ನು ನೀಡುವುದು ಸರಿಯಲ್ಲ’ ಎಂದರು.

ರಾಷ್ಟ್ರಪತಿ, ಪ್ರಧಾನಿಗೆ ಪತ್ರ
ರಾಜ್ಯಪಾಲರನ್ನು ವಾಪಸ್ ಕರೆಸುಕೊಳ್ಳುವಂತೆ ಶಿವಾಜಿ ಅವರ 13ನೇ ಪೀಳಿಗೆಯವರಾದ ಛತ್ರಪತಿ ಉದಯನ್‌ರಾಜೆ ಹಾಗೂ ಯುವರಾಜ ಸಾಂಬಾಜಿರಾಜೆ ಛತ್ರಪತಿ ಅವರುರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ರಾಜ್ಯಪಾಲರ ಹೇಳಿಕೆಯಿಂದ ನನಗೆ ನೋವಾಗಿದೆ. ರಾಜ್ಯಪಾಲರದ್ದು ದೇಶದ ಜನರ ನಂಬಿಕೆಗೆ ತದ್ವಿರುದ್ಧವಾದ ಹೇಳಿಕೆಯಾಗಿದೆ. ಇಂಥ ಹೇಳಿಕೆಗಳನ್ನು ತಡೆಯದಿದ್ದರೆ, ಶಿವಾಜಿ ಅವರ ಕುರಿತು ದೇಶದಲ್ಲಿ ಭಿನ್ನ ವಾದಗಳು ಹುಟ್ಟಿಕೊಳ್ಳಲಿದೆ. ಇದು ಸಾಮಾಜದಲ್ಲಿ ಅಶಾಂತಿಗೆ ಕಾರಣವಾಗಲಿದೆ’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯರೂ ಆಗಿರುವಉದಯನ್‌ರಾಜೆ ಅವರು ಪತ್ರದಲ್ಲಿ ಹೇಳಿದ್ದಾರೆ.

ನಿಮ್ಮ ನಿಲುವೇನು: ಬಿಜೆಪಿಗೆ ಕಾಂಗ್ರೆಸ್‌ ಪ್ರಶ್ನೆ
ಧೂಲ್ಹರ್‌ ಫಟಾ (ಮಧ್ಯಪ್ರದೇಶ) (ಪಿಟಿಐ):
‘ಸಾವರ್ಕರ್‌ ಬಗ್ಗೆ ಕಾಂಗ್ರೆಸ್‌ ಅನ್ನು ಪ್ರಶ್ನಿಸುವ ಮೊದಲು ಛತ್ರಪತಿ ಶಿವಾಜಿ ಮಹಾರಾಜದ ಕುರಿತು ಬಿಜೆಪಿಯು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಆಗ್ರಹಿಸಿದ್ದಾರೆ.

ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಗೆ ಗುರುವಾರ ‘ಭಾರತ್‌ ಜೋಡೊ ಯಾತ್ರೆ’ ತಲುಪಿದ ಸಂದರ್ಭದಲ್ಲಿ ಅವರು ಮಾತನಾಡಿದರು. ‘ಮಹಾರಾಷ್ಟ್ರ ರಾಜ್ಯಪಾಲ ಮತ್ತು ನಿಮ್ಮ ವಕ್ತಾರಸುಧಾಂಶು ತ್ರಿವೇದಿ ಅವರು ಶಿವಾಜಿ ಅವರ ಕುರಿತು ಏನೇನೆಲ್ಲಾ ಮಾತನಾಡಿದ್ದಾರೆ. ಸಾವರ್ಕರ್‌ ಕುರಿತ ನಮ್ಮ ನಿಲುವು ಏನು ಎಂದು ಯಾವಾಗಲೂ ಕೇಳುತ್ತೀರಿ. ಈಗ ನಾನು ನಿಮಗೆ (ಬಿಜೆಪಿ) ಕೇಳುತ್ತೇನೆ. ಶಿವಾಜಿ ಕುರಿತು ನಿಮ್ಮ ನಿಲುವೇನು?’ ಎಂದರು.

*
ಅಮೆಜಾನ್‌ ಮೂಲಕ ಕೇಂದ್ರದಿಂದ ಮಹಾರಾಷ್ಟ್ರಕ್ಕೆ ಕಳುಹಿಸಲ್ಪಟ್ಟ ಈ ‘ಪಾರ್ಸೆಲ್‌’ ಅನ್ನು ಇನ್ನು ಎರಡು ಮೂರು ದಿನಗಳಲ್ಲಿ ವಾಪಸ್‌ ಕರೆಸಿಕೊಳ್ಳಬೇಕು.
–ಉದ್ಧವ್ ಠಾಕ್ರೆ, ಶಿವಸೇನೆ (ಉದ್ಧವ್‌ ಬಣ) ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.