ಮುಂಬೈ: ರಾಜ್ಯದ ಸರ್ಕಾರಿ ನೌಕರರಿಗಾಗಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ತರಲು ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್‌ಪಿಎಸ್) ಇರುವ ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮೂಲ ವೇತನದಶೇ 50ರಷ್ಟನ್ನು ಪಿಂಚಣಿಯಾಗಿ ನೀಡಲು ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾನುವಾರ ಯುಪಿಎಸ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರ ಸಂಪುಟ ಸಭೆಯ ನಿರ್ಧಾರದ ಪ್ರಕಾರ, ಏಕೀಕೃತ ಪಿಂಚಣಿ ಯೋಜನೆ ಈ ವರ್ಷದ ಮಾರ್ಚ್‌ನಿಂದ ಜಾರಿಗೆ ಬರಲಿದ್ದು, ಎಲ್ಲಾ ಸರ್ಕಾರಿ ನೌಕರರಿಗೂ ಇದರ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ₹7,000 ಕೋಟಿ ವೆಚ್ಚದ ನಿರಂತರ ವಿದ್ಯುತ್ ಸರಬರಾಜು ಯೋಜನೆಯನ್ನು ವಿಸ್ತರಿಸುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಉತ್ತರ ಮಹಾರಾಷ್ಟ್ರದ ಹಲವು ಜಿಲ್ಲೆಗಳ ರೈತರಿಗೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಕನಾಥ ಶಿಂದೆ ಅವರ ಸ್ವಕ್ಷೇತ್ರವಾದ ಥಾಣೆ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮಹಾತ್ಮ ಫುಲೆ ನವೀಕರಿಸಬಹುದಾದ ಇಂಧನ ಮತ್ತು ಮೂಲಸೌಕರ್ಯ ತಂತ್ರಜ್ಞಾನ ಲಿಮಿಟೆಡ್ ಅಡಿಯಲ್ಲಿ ₹5,000 ಕೋಟಿ ವೆಚ್ಚ ಮಾಡಲಾಗುವುದು’ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ಸಾತಾರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶಿವಾಜಿ ಮಹಾರಾಜರ ವಂಶಸ್ಥ ಉದಯನ್ ರಾಜೆ ಭೋಸ್ಲೆ ಅವರ ಒಡೆತನದ ಜಮೀನಿಗೆ ಜಾರಿಯಲ್ಲಿರುವ ಕಂದಾಯ ಪರಿಹಾರವು ಅವರ ಉತ್ತರಾಧಿಕಾರಿಗಳಿಗೂ ಅನ್ವಯವಾಗಲಿದೆ ಎಂದು ಸಚಿವ ಸಂಪುಟ ತಿಳಿಸಿದೆ.
ಏಕನಾಥ ಶಿಂದೆ ಅವರ ಅಧಿಕಾರಾವಧಿ ನವೆಂಬರ್‌ಗೆ ಕೊನೆಗೊಳ್ಳಲಿದ್ದು, ವರ್ಷಾಂತ್ಯ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಶನಿವಾರ ಕೇಂದ್ರ ಸಂಪುಟ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 2004ರ ಏಪ್ರಿಲ್ 1ರ ಬಳಿಕ ಕೆಲಸಕ್ಕೆ ಸೇರಿದ ನೌಕರರಿಗೆ ಎನ್‌ಪಿಎಸ್ ಅನ್ವಯವಾಗುತ್ತದೆ. ಏಕೀಕೃತ ಪಿಂಚಣಿ ಯೋಜನೆಯಡಿ (ಯುಪಿಎಸ್) ಸರ್ಕಾರಿ ನೌಕರರು ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ ಕನಿಷ್ಠ ಶೇ 50ರಷ್ಟನ್ನು ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.