ADVERTISEMENT

ಮಹಾರಾಷ್ಟ್ರ: ಡಿಜಿಪಿ ಸ್ಥಾನದಲ್ಲಿ ರಶ್ಮಿ ಶುಕ್ಲಾ ಮರು ನಿಯುಕ್ತಿ

ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ವರ್ಗಾವಣೆಗೊಂಡಿದ್ದ ಪೊಲೀಸ್‌ ಮಹಾನಿರ್ದೇಶಕಿ (ಡಿಜಿಪಿ) ರಶ್ಮಿ ಶುಕ್ಲಾ ಅವರನ್ನು ಡಿಜಿಪಿ ಸ್ಥಾನದಲ್ಲಿ ಮರು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಪಿಟಿಐ
Published 26 ನವೆಂಬರ್ 2024, 2:36 IST
Last Updated 26 ನವೆಂಬರ್ 2024, 2:36 IST
<div class="paragraphs"><p>ರಶ್ಮಿ ಶುಕ್ಲಾ</p></div>

ರಶ್ಮಿ ಶುಕ್ಲಾ

   

ನವದೆಹಲಿ: ಮಹಾರಾಷ್ಟ್ರ ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ವರ್ಗಾವಣೆಗೊಂಡಿದ್ದ ಪೊಲೀಸ್‌ ಮಹಾನಿರ್ದೇಶಕಿ (ಡಿಜಿಪಿ) ರಶ್ಮಿ ಶುಕ್ಲಾ ಅವರನ್ನು ಡಿಜಿಪಿ ಸ್ಥಾನದಲ್ಲಿ ಮರು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಮಹಾರಾಷ್ಟ್ರ ಗೃಹ ಇಲಾಖೆ ಈ ಕುರಿತು ಸೋಮವಾರ ರಾತ್ರಿ ಆದೇಶ ಹೊರಡಿಸಿದೆ.

ADVERTISEMENT

ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳಿಗೆ ಡಿಜಿಪಿ ರಶ್ಮಿ ಶುಕ್ಲಾ ಸಹಾಯ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿದ್ದವು. ಅಲ್ಲದೇ ಅವರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದವು.

ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗ ರಶ್ಮಿ ಶುಕ್ಲಾ ಅವರನ್ನು ಡಿಜಿಪಿ ಸ್ಥಾನದಿಂದ ತಕ್ಷಣವೇ ವರ್ಗಾವಣೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ವರ್ಮಾ ಹಂಗಾಮಿ ಡಿಜಿಪಿ ಆಗಿ ನೇಮಕಗೊಂಡಿದ್ದರು.

ವರ್ಗಾವಣೆ ಆದೇಶದ ನಂತರ ರಶ್ಮಿ ಅವರಿಗೆ ಯಾವುದೇ ಹುದ್ದೆ ತೋರಿಸದೇ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಸದ್ಯದ ಬೆಳವಣಿಗೆ ನಂತರ ಸಂಜಯ್ ಕುಮಾರ್ ವರ್ಮಾ ಅವರು ತಮ್ಮ ಹಿಂದಿನ ಸ್ಥಾನವನ್ನು ಅಲಂಕರಿಸಿದ್ದಾರೆ.

ಡಿಜಿಪಿ ರಶ್ಮಿ ಅವರು ಮಹಾರಾಷ್ಟ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ದೂರಿದ್ದವು.

‘ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಹಾಗೂ ನ್ಯಾಯಸಮ್ಮತವಾಗಿ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದ ವೇಳೆ ಪಕ್ಷಾತೀತವಾಗಿ ವರ್ತಿಸಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಎಚ್ಚರಿಸಿದ್ದರು.

ಮಹಾರಾಷ್ಟ್ರದಲ್ಲಿ ಈಚೆಗೆ ರಾಜಕೀಯ ಪ್ರೇರಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅವರು, ‘ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಿ, ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಂತೆ’ ಡಿಜಿಪಿ ರಶ್ಮಿ ಅವರಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.