ಜಲ್‌ಗಾಂವ್: ಮೊಸಳೆ ಕಣ್ಣೀರು ಸುರಿಸಿ ಜನರನ್ನು ಮೋಸ ಮಾಡುವ ಈ ನಾಯಕರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ370ನೇ ವಿಧಿಯನ್ನು ಮತ್ತೆ ಚಾಲ್ತಿಗೆ ತರಲು ಸಾಧ್ಯವೇ?ದೇಶದ ಜನರು ಅದನ್ನು ಒಪ್ಪುತ್ತಾರಾ?370ನೇ ವಿಧಿಯನ್ನು ಮತ್ತೆ ತರುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಿ ನೋಡೋಣಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಸವಾಲು ಎಸೆದಿದ್ದಾರೆ.
ಭಾನುವಾರ ಮಹಾರಾಷ್ಟ್ರದ ಜಲ್‌ಗಾಂವ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ ಕಾಂಗ್ರೆಸ್ ಮತ್ತು ಎನ್‌ಸಿಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಲಡಾಕ್ ಬರೀತುಂಡು ಭೂಮಿ ಅಥವಾ ಭೂಪ್ರದೇಶ ಅಲ್ಲ. ನಮ್ಮ ಪಾಲಿಗೆ ಅದು ಭಾರತದ ಮುಕುಟ. ಅದರ ರಕ್ಷಣೆಗಾಗಿ ನಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಆ ಪ್ರದೇಶಗಳಲ್ಲಿ ಸಮಸ್ಯೆಗಳಿದ್ದರೂ ಅಲ್ಲಿ ಸಹಜ ಸ್ಥಿತಿ ಕಾಪಾಡಲು ನಾವು ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ.
ಸಂವಿಧಾನದ 370ನೇ ವಿಧಿ ರದ್ದು ಮಾಡಲು ಕೇಂದ್ರ ಸರ್ಕಾರ ಆಗಸ್ಟ್ 5ರಂದು ತೆಗೆದುಕೊಂಡ ನಿರ್ಧಾರವು ಐತಿಹಾಸಿಕ ನಿರ್ಧಾರವಾಗಿದೆ. ಅದರ ಜತೆಗೆ ನಾವು ವಾಲ್ಮೀಕಿ ಸಮುದಾಯದವರ ಹಕ್ಕುಗಳನ್ನು ಮತ್ತೆ ಮರಳಿಸಿದೆವು .
ರಾಮಾಯಣ ರಚಿಸಿದ ವಾಲ್ಮೀಕಿ ಅವರ ಜಯಂತಿ ಇಂದು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಇದ್ದ ಕಾರಣ ಕಳೆದ 70 ವರ್ಷಗಳಲ್ಲಿ ವಾಲ್ಮೀಕಿ ಸಮುದಾಯದವರಿಗೆ ಅಲ್ಲಿ ಯಾವುದೇ ಹಕ್ಕು ಇರಲಿಲ್ಲ ಎಂದಿದ್ದಾರೆ ಮೋದಿ.
ನೆರೆಯ ರಾಷ್ಟ್ರವೊಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಘರ್ಷವನ್ನುಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನದ ಹೆಸರು ಉಲ್ಲೇಖಿಸದೆ ದೂರಿದ್ದಾರೆ ಮೋದಿ. ಜಮ್ಮು ಮತ್ತು ಕಾಶ್ಮೀರ ಆದಷ್ಟು ಬೇಗನೆ ಯಥಾಸ್ಥಿತಿಗೆ ಮರುಳುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಭದ್ರತೆ ವಿಷಯದಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ನಾವು ಅಲ್ಲಿನ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಕಾರ್ಯ ನಿರ್ವಹಿಸುತ್ತಿದ್ದೇವೆ. ಕಳೆದ 40 ವರ್ಷಗಳಿಂದ ಕೆಟ್ಟು ಹೋಗಿದ್ದ ಅಲ್ಲಿನ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ನಾವು ನಾಲ್ಕು ತಿಂಗಳು ಕೂಡಾ ತೆಗೆದುಕೊಳ್ಳುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.