ನವದೆಹಲಿ: ವರ್ಷದ ಕೊನೆಯಲ್ಲಿ ಎರಡು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾರರು ಸ್ಪಷ್ಟ ತೀರ್ಪು ನೀಡಿದ್ದಾರೆ. ದೇಶದ ಶ್ರೀಮಂತ ರಾಜ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಿ ಪ್ರಚಂಡ ದಿಗ್ವಿಜಯ ಸಾಧಿಸಿದೆ. ಸಣ್ಣ ರಾಜ್ಯ ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟ ಜಯಭೇರಿ ಬಾರಿಸಿದೆ.
ಉಗ್ರ ಹಿಂದುತ್ವದ ಅಸ್ತ್ರದ ಮೊನಚು ಬಳಕೆ, ಜಾತಿ ಸಮೀಕರಣ ಹಾಗೂ ನೇರ ನಗದು ವರ್ಗಾವಣೆಯ ಯೋಜನೆಗಳನ್ನು ಚುನಾವಣೆಗೆ ಕೈಮರವನ್ನಾಗಿ ಮಾಡಿಕೊಂಡ ಮಹಾಯುತಿ ಮೈತ್ರಿಕೂಟವು ವಿಜಯದ ನಗೆ ಬೀರಿದೆ. ಪ್ರತಿಕೂಲ ಸನ್ನಿವೇಶವನ್ನು ಅನುಕೂಲಕಾರಿಯಾಗಿ ಪರಿವರ್ತಿಸಿಕೊಂಡ ಕೇಸರಿ ಪಡೆಯು ಹಿಂದಿ ಸೀಮೆಯ ರಾಜ್ಯಗಳಲ್ಲಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಪ್ರಬಲ ಆಡಳಿತ ವಿರೋಧಿ ಅಲೆಯ ನಡುವೆಯೂ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಈ ಪಟ್ಟಿಗೆ ಮಹಾರಾಷ್ಟ್ರ ತಾಜಾ ಸೇರ್ಪಡೆ. ಸಂಸತ್ ಅಧಿವೇಶನದಲ್ಲಿ ನಿತ್ಯ ಕಾಡುತ್ತಿದ್ದ ‘ಇಂಡಿಯಾ’ ಮೈತ್ರಿಕೂಟದ ನಾಯಕರನ್ನು ಹೊಸ ಉಮೇದಿನಿಂದ ಎದುರಿಸಲು ಎನ್‌ಡಿಎ ಮೈತ್ರಿಕೂಟಕ್ಕೆ ಈ ಫಲಿತಾಂಶ ಟಾನಿಕ್ ನೀಡಿದೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ್ದ ‘ಮಹಾವಿಕಾಸ ಆಘಾಡಿ’ ಮೈತ್ರಿಕೂಟವು ವಿಧಾನಸಭಾ ಚುನಾವಣೆಯಲ್ಲಿ ಅರ್ಧ ಶತಕದ ಗಡಿ ದಾಟಲು ಏದುಸಿರು ಬಿಟ್ಟಿದೆ. ಅಧಿಕೃತ ವಿರೋಧ ಪಕ್ಷಕ್ಕೆ ಬೇಕಿರುವ ಸ್ಥಾನಗಳನ್ನು ಗೆಲ್ಲುವಲ್ಲಿ ಮೈತ್ರಿ ಪಕ್ಷಗಳು ವಿಫಲವಾಗಿವೆ.
ರಾಜ್ಯಗಳಲ್ಲಿ ಗೆಲುವಿನ ಅಂಚು ತಲುಪಿ ಕೈ ಕಾಲು ಬಡಿಯುವ ಬಿಜೆಪಿಯನ್ನು ತನ್ನ ಪ್ರಭಾವಳಿಯಿಂದಲೇ ಗೆಲ್ಲಿಸುತ್ತೇನೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ರುಜುವಾತುಪಡಿಸಿದ್ದಾರೆ. ರಾಜ್ಯದಲ್ಲಿ 10 ರ‍್ಯಾಲಿಗಳಲ್ಲಿ ಭೋರ್ಗರೆದಿದ್ದ ಪ್ರಧಾನಿ ಅವರು ಹಿಂದೂಗಳ ಏಕತೆ ಬಗ್ಗೆ ಒತ್ತಿ ಹೇಳಿದ್ದರು. ಹಿಂದೂ-ಮುಸ್ಲಿಂ ಧ್ರುವೀಕರಣದ ಕಿಡಿ ಹಾರಿಸುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಹಾರಾಷ್ಟ್ರದಲ್ಲಿ 11 ರ‍್ಯಾಲಿಗಳಲ್ಲಿ ಉಗ್ರ ಭಾಷಣಗಳನ್ನು ಮಾಡಿದ್ದರು. ‘ಬಟೋಗೆ ತೊ ಕಟೋಗೆ’ (ಒಗ್ಗಟ್ಟು ಇಲ್ಲದಿದ್ದರೆ ನಮ್ಮನ್ನು ಮುಗಿಸುತ್ತಾರೆ) ನಿರೂಪಣೆಯ ಮೂಲಕ ಮತ ಧ್ರುವೀಕರಣದ ಕಿಡಿ ಹೊತ್ತಿಸಿದ್ದರು. ಬಿಜೆಪಿಯ ಉಳಿದ ನಾಯಕರು ಇದೇ ಧಾಟಿಯಲ್ಲಿ ಮಾತನಾಡಿದ್ದರು. ಈ ಮಾತುಗಳು ಮೈತ್ರಿಕೂಟಕ್ಕೆ ಅಚ್ಚರಿಯ ಫಸಲನ್ನು ತಂದುಕೊಟ್ಟಿವೆ. ಉತ್ತರ ಪ್ರದೇಶ ವಿಧಾನಸಭೆಯ ಉಪಚುನಾವಣೆಯಲ್ಲಿ ಪಕ್ಷವನ್ನು ಏಳು ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಯೋಗಿ ಅವರು ದೊಡ್ಡ ತೂಗುಗತ್ತಿಯಿಂದಲೂ ಪಾರಾಗಿದ್ದಾರೆ.
ಸುಮಾರು ಶೇ 28ರಷ್ಟಿರುವ ಮರಾಠ ಮತಗಳು, ಶೇ 52ರಷ್ಟಿರುವ ಹಿಂದುಳಿದ ವರ್ಗಗಳ ಮತಗಳು ಹಾಗೂ ಶೇ 15ರಷ್ಟಿರುವ ದಲಿತ ಮತಗಳ ಮೇಲೆ ಕಣ್ಣಿಟ್ಟು ಹೆಣೆದ ಜಾತಿ ಸಮೀಕರಣವೂ ಮೈತ್ರಿಕೂಟಕ್ಕೆ ಭಾರಿ ಲಾಭ ತಂದುಕೊಟ್ಟಿದೆ. ಆರ್‌ಎಸ್‌ಎಸ್‌ನ ಸಹಾಯಹಸ್ತವೂ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ರಾಜ್ಯದಲ್ಲಿ 1.25 ಲಕ್ಷದಷ್ಟು ಸಣ್ಣ ಸಣ್ಣ ಸಭೆಗಳನ್ನು ನಡೆಸಿ ಮನೆ ಹಾಗೂ ಜನರ ಮನಗಳನ್ನು ಮುಟ್ಟಿದರು. ಹಿಂದೂ ಮತಗಳ ಕ್ರೋಡೀಕರಣಕ್ಕೆ ಸದ್ದಿಲ್ಲದೆ ಕೆಲಸ ಮಾಡಿದರು.
ಬಿಜೆಪಿ ನಾಯಕರ ‘ಸಂವಿಧಾನ ಬದಲು’ ಹೇಳಿಕೆಗಳ ವಿರುದ್ಧ ಅಭಿಯಾನ ಹಾಗೂ ಜಾತಿ ಜನಗಣತಿಯಂತಹ ‘ಮಂತ್ರದಂಡ’ಗಳನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ನೂರರ ಗಡಿಗೆ ತಲುಪಿದ್ದ ಕಾಂಗ್ರೆಸ್ ಪಕ್ಷವು ಮತ್ತೆ ಸೋತು ಸುಣ್ಣವಾಗಿದೆ. ಗೆಲ್ಲುವ ಭರಪೂರ ಅವಕಾಶ ಇರುವ ರಾಜ್ಯಗಳಲ್ಲಿ ‘ಕೈ’ ಪಾಳಯ ಸೋಲುತ್ತಿರುವುದು ಇದೇ ಮೊದಲಲ್ಲ. ಮಧ್ಯ ಪ್ರದೇಶ, ಛತ್ತೀಸಗಢ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷವು ಅವಕಾಶಗಳನ್ನು ಕೈಚೆಲ್ಲಿತ್ತು. ಬಿಜೆಪಿಯೊಂದಿಗೆ ನೇರ ಸ್ಪರ್ಧೆ ಅಥವಾ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಾಲುದಾರರಾಗಿರುವ ರಾಜ್ಯಗಳಲ್ಲಿ ಪಕ್ಷ ಮತ್ತೊಮ್ಮೆ ತನ್ನ ವೈಫಲ್ಯವನ್ನು ಬಟಾಬಯಲು ಮಾಡಿದೆ. ನಾಯಕತ್ವ, ಸಂಘಟನಾ ಸಾಮರ್ಥ್ಯ, ರಾಜಕೀಯ ಜಾಣ್ಮೆ, ರಣತಂತ್ರ ಹಾಗೂ ಗೆಲುವಿನ ಹಸಿವಿನ ಅಗ್ನಿಪರೀಕ್ಷೆಯಲ್ಲಿ ಪಕ್ಷ ಪುನಃ ಎಡವಿದೆ. ಅವಕಾಶಗಳನ್ನು ಕೈಚೆಲ್ಲುವ ತನ್ನ ಹಳೆಯ ಚಾಳಿಯನ್ನು ಪುನರಾವರ್ತಿಸಿದೆ. ಗತವೈಭವದ ಸ್ವಪ್ರತಿಷ್ಠೆಯನ್ನು ಬಿಟ್ಟುಕೊಟ್ಟು ಯಶಸ್ವಿ ಮೈತ್ರಿಕೂಟಗಳನ್ನು ಕಟ್ಟದಿದ್ದರೆ ಪಕ್ಷಕ್ಕೆ ಇನ್ನಷ್ಟು ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾರಿದೆ.
ಆದಿವಾಸಿಗಳ ತಾಣದಲ್ಲಿ ನಡೆಯದ ಎನ್‌ಡಿಎ ಆಟ
ಸಣ್ಣ ಪ್ರಾದೇಶಿಕ ಪಕ್ಷವೊಂದನ್ನು ಹಣಿಯಲು ಅತಿರಥ ಮಹಾರಥ ನಾಯಕರನ್ನು ಹಾಗೂ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡರೂ ಜಾರ್ಖಂಡ್‌ನಲ್ಲಿ ಅಧಿಕಾರದ ಗದ್ದುಗೆ ಏರುವ ಕಮಲ ಪಾಳಯದ ಮಹದಾಸೆ ಭಗ್ನಗೊಂಡಿದೆ. ಆಡಳಿತ ವಿರೋಧಿ ಅಲೆ ಮಧ್ಯೆಯೂ ಅನುಕಂಪದ ಅಲೆಯನ್ನು ಊರುಗೋಲಾಗಿ ಬಳಸಿಕೊಂಡು ಆದಿವಾಸಿಗಳ ಮನ ಗೆದ್ದ ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರು ಮತ್ತೆ ಮುಖ್ಯಮಂತ್ರಿ ಗಾದಿಗೆ ಏರಲು ಸಜ್ಜಾಗಿದ್ದಾರೆ.
ಜಾರ್ಖಂಡ್ ರಾಜ್ಯ ಸ್ಥಾಪನೆಯಾದ ಬಳಿಕ ಸತತ ಎರಡನೇ ಅವಧಿಗೆ ಯಾವುದೇ ಪಕ್ಷವನ್ನು ಜನರು ಆರಿಸಿದ ಉದಾಹರಣೆ ಇಲ್ಲ. ಈ ಅಲಿಖಿತ ಸಂಪ್ರದಾಯವನ್ನು ಅಲ್ಲಿನ ಮತದಾರರು ಈ ಸಲ ಮುರಿದಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕ್ಷೇತ್ರಗಳಲ್ಲಿ ಪಾರಮ್ಯ ಮೆರೆದಿರುವ ‘ಇಂಡಿಯಾ’ ಮೈತ್ರಿಕೂಟವು ಬುಡಕಟ್ಟು ರಾಜ್ಯದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ದಾಖಲಿಸಿದೆ.
ರಾಜ್ಯದಲ್ಲಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೋಡಿಯು ಪ್ರಚಾರದ ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಂಡಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿತ್ತು. ಬಿಜೆಪಿ ನಾಯಕರು ಒಡಕು ಮಾತುಗಳನ್ನು ಎಗ್ಗಿಲ್ಲದೆ ಆಡಿದ್ದರು. ಬಿಜೆಪಿಯ ಧ್ರುವೀಕರಣದ ರಾಜಕಾರಣಕ್ಕೆ ಹೇಮಂತ್ ಸೊರೇನ್ ಹಾಗೂ ಅವರ ಪತ್ನಿ ಕಲ್ಪನಾ ಸೊರೇನ್ ಅವರು ಸುಮಾರು 200 ರ‍್ಯಾಲಿಗಳನ್ನು ನಡೆಸುವ ಮೂಲಕ ಸಡ್ಡು ಹೊಡೆದರು. ಬುಡಕಟ್ಟು ಜನರ ಆಸ್ಮಿತೆಯ ವಿಷಯ ಮುಂದಿಟ್ಟುಕೊಂಡು ಹೂಡಿದ ಪ್ರತಿತಂತ್ರವು ಭಾರಿ ಫಲ ಕೊಟ್ಟಿದೆ.
ಮಹಿಳಾ ಕಟಾಕ್ಷ:
ನೇರ ನಗದು ವರ್ಗಾವಣೆಯ ಮಹಿಳಾ ಕೇಂದ್ರಿತ ಯೋಜನೆಗಳ ಬಲದಿಂದ ಆಡಳಿತಾರೂಢ ಪಕ್ಷಗಳು ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಗೆಲುವಿನ ದಡ ಮುಟ್ಟಿವೆ. ಕರ್ನಾಟಕದ ‘ಗೃಹಲಕ್ಷ್ಮಿ’ ಯೋಜನೆಯ ಪರಿಷ್ಕೃತ ರೂಪ ‘ಲಾಡ್ಲಿ ಬೆಹನಾ’ವನ್ನು ಬಿಜೆಪಿಯು ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಜಾರಿಗೊಳಿಸಿತ್ತು. ಪಕ್ಷದ ಗೆಲುವಿನ ಚಮತ್ಕಾರಕ್ಕೆ ಮಹಿಳಾ ಕಟಾಕ್ಷವೇ ಪ್ರಮುಖ ಕಾರಣವಾಗಿತ್ತು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕಟುವಾಗಿ ಟೀಕಿಸುತ್ತಲೇ ಮಹಾಯುತಿ ಮೈತ್ರಿಕೂಟವು ‘ಲಡ್ಕಿ ಬಹೀಣ್ ಯೋಜನಾ’ (ಪ್ರತಿ ಮಹಿಳೆಗೆ ತಿಂಗಳಿಗೆ ₹1,500) ಜಾರಿಗೊಳಿಸಿತು. ಈ ಯೋಜನೆಯ ಮೂಲಕ 2.5 ಕೋಟಿಗೂ ಅಧಿಕ ಮಹಿಳೆಯರ ಖಾತೆಗಳಿಗೆ ನಾಲ್ಕೈದು ತಿಂಗಳು ನಗದು ವರ್ಗಾವಣೆಯಾಯಿತು. ಪ್ರತಿಯಾಗಿ ಮಹಿಳಾ ಮತದಾರರು ಮೈತ್ರಿಕೂಟಕ್ಕೆ ಬಲ ನೀಡಿದರು. ಜಾರ್ಖಂಡ್‌ನಲ್ಲಿ ಸೊರೇನ್ ಅವರೂ ಇದೇ ತಂತ್ರ ಅನುಸರಿಸಿ ಮಹಿಳೆಯರ ಮನ ಗೆದ್ದರು.
ಬಹುಮತದ ಹತ್ತಿರಕ್ಕೆ ಕೇಸರಿ:
1990ರ ದಶಕದಿಂದ 2009ರವರೆಗೆ ವಿಧಾನಸಭಾ ಚುನಾವಣೆಗಳಲ್ಲಿ 40–50ರ ಆಜುಬಾಜಿನ ಸ್ಥಾನಗಳಲ್ಲಷ್ಟೇ ಗೆಲ್ಲುತ್ತಿದ್ದ ಬಿಜೆಪಿಯು 2014ರ ಚುನಾವಣೆಯಲ್ಲಿ 122 ಸ್ಥಾನಗಳನ್ನು ಗೆದ್ದಿತ್ತು. ಅಲ್ಲಿಯವರೆಗೆ ಮೈತ್ರಿಕೂಟದ ಕಿರಿಯ ಪಾಲುದಾರನಾಗಿದ್ದ ಪಕ್ಷವು ಹಿರಿಯ ಪಾಲುದಾರನ ಸ್ಥಾನಕ್ಕೆ ಬಡ್ತಿ ಪಡೆದಿತ್ತು. 2019ರ ಚುನಾವಣೆಯಲ್ಲಿ 105 ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ಪ್ರಾದೇಶಿಕ ಪಕ್ಷಗಳಲ್ಲಿ ಒಡಕು ಸೃಷ್ಟಿಸಿ ಅದರ ಭರ್ಜರಿ ಲಾಭವನ್ನು ಗಳಿಸಿರುವ ಪಕ್ಷವು ಈ ಸಲ 132 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಪಕ್ಷ ಸ್ಪರ್ಧಿಸಿದ್ದು 148 ಕ್ಷೇತ್ರಗಳಲ್ಲಿ. ಪಕ್ಷದ ಸ್ಟ್ರೈಕ್ ರೇಟ್ ಶೇ 90ರಷ್ಟು. ಪಕ್ಷ ಸರಳ ಬಹುಮತದ ಅಂಚಿಗೆ ಬಂದು ನಿಂತಿದೆ. ರಾಜ್ಯದಲ್ಲಿ ಕಳೆದ 34 ವರ್ಷಗಳಲ್ಲಿ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆ ಇಲ್ಲ.
– ಮಹಾರಾಷ್ಟ್ರ: ದೇವೇಂದ್ರ ಫಡಣವಿಸ್, ಏಕನಾಥ ಶಿಂದೆ
– ಜಾರ್ಖಂಡ್: ಹೇಮಂತ್ ಸೊರೇನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.