ರಾಂಚಿ/ಮುಂಬೈ: ಜಾರ್ಖಂಡ್‌ನಲ್ಲಿ 38 ವಿಧಾನಸಭೆ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಬುಧವಾರ ನಡೆಯಿತು. ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಎರಡೂ ರಾಜ್ಯಗಳಲ್ಲಿ ಮತದಾನವು ಬಹುತೇಕ ಶಾಂತಿಯುತವಾಗಿ ನಡೆದಿದೆ. ಆದರೆ, ಮಹಾರಾಷ್ಟ್ರದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿ ಮಧ್ಯೆ ವಾಕ್ಸಮರ ನಡೆದಿದೆ. ಶಿವಸೇನಾ ಅಭ್ಯರ್ಥಿ ಮೇಲೆ ಗುಂಡಿನ ದಾಳಿ ಆಗಿರುವ ಘಟನೆಯೂ ನಡೆದಿದೆ.
ಜಾರ್ಖಂಡ್‌ನ ಲತೆಹರ್ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ನಕ್ಸಲರು ದಾಳಿ ನಡೆಸಿದ್ದಾರೆ. ಮತದಾರರಲ್ಲಿ ಭಯ ಹುಟ್ಟಿಸುವ ಸಲುವಾಗಿ ನಿಷೇಧಿತ ಸಂಘಟನೆಯಾದ ‘ಜಾರ್ಖಂಡ್ ಪ್ರಸ್ತುತಿ ಸಮಿತಿ’ (ಜೆಪಿಸಿ) ನಕ್ಸಲರು ಐದು ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆ ಹೊರತುಪಡಿಸಿ, ನಕ್ಸಲ್ ಬಾಧಿತ
ಇತರ ಜಿಲ್ಲೆಗಳಲ್ಲಿ ಮತದಾನವು
ಶಾಂತಿಯುತವಾಗಿತ್ತು.
‘ಮಹಾಯುತಿ’ ಹಾಗೂ ‘ಮಹಾ ವಿಕಾಸ ಆಘಾಡಿ’ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿರುವ ಮಹಾರಾಷ್ಟ್ರ ದಲ್ಲಿ ಬುಧವಾರ ಹಲವು ಘಟನೆಗಳು ಸಂಭವಿಸಿವೆ. ಬಿಜೆಪಿ, ಶಿವಸೇನಾ, ಶಿವಸೇನಾ (ಉದ್ಧವ್ ಬಣ) ಹಾಗೂ ಎನ್‌ಸಿಪಿ (ಶರದ್ ಬಣ) ಅಭ್ಯರ್ಥಿಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿವೆ.
ಮುಂಬೈನ ನಗರವಾಸಿಗಳು ತಮ್ಮ ಆಲಸ್ಯವನ್ನು ಮುಂದುವರಿಸಿದ್ದಾರೆ
ಎಂದು ಚುನಾವಣಾ ಆಯೋಗ ಬೇಸರ ವ್ಯಕ್ತಪಡಿಸಿದೆ. ‘ನಗರವಾಸಿಗಳು ಮತದಾನಕ್ಕೆ ಬರುವಂತೆ ಹಲವು ಅಭಿಯಾನಗಳನ್ನು ನಡೆಸಿದರೂ ಜನರು ನಿರಾಸಕ್ತಿ ತೋರಿಸಿದರು’ ಎಂದು ಆಯೋಗ ಹೇಳಿದೆ.
* ಕುಷ್ಠರೋಗಿಗಳಿಗಾಗಿಯೇ ವಿಶೇಷ
ವಾಗಿ ಸಿಂಗರಿಸಲಾಗಿದ್ದ ಬೂತ್‌ಗಳಲ್ಲಿ ಇದೇ ಮೊದಲ ಬಾರಿಗೆ ರೋಗಿಗಳು ಮತದಾನ ಮಾಡಿದರು. ಜಾರ್ಖಂಡ್‌ನ ಜಮತಾಢಾದಲ್ಲಿ ಈ ಪ್ರಯೋಗ ಮಾಡಲಾಗಿದೆ.
* ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಮುಂಬೈನ 113ರ ಕಂಚನ್‌ಬೇನ್ ನಂದ್‌ಕಿಶೋರ್ ಬಾದ್‌ಶಾ ಹಾಗೂ 103ರ ಜಿ.ಜಿ. ಪಾರಿಖ್ ಅವರು ಬೆಳಿಗ್ಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಸ್ವಾತಂತ್ರ್ಯಾ ನಂತರ ನಡೆದ ಎಲ್ಲ ಚುನಾವಣೆಗಳಲ್ಲಿಯೂ
ಪಾರಿಖ್ ಅವರು ಮತದಾನ ಮಾಡಿದ್ದಾರೆ. ಮಹಾರಾಷ್ಟ್ರದ ಲಾತೂರ್ ನಗರದಲ್ಲಿ 101 ವರ್ಷದ ನರ್ಮದಾಬಾಯಿ ಮದನ್‌ಲಾಲ್ ತೋಶ್ನಿವಾಲ್ ಅವರೂ ಬುಧವಾರ ಮತಚಲಾಯಿಸಿದರು
* ಮಾಧುಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರ ಪ್ರಿಸೈಡಿಂಗ್ ಅಧಿಕಾರಿ ರಮಾನಂದ್ ಕುಮಾರ್ ಪಾಸ್ವಾನ್ ಅವರು ಜೆಎಂಎಂನ ಅಭ್ಯರ್ಥಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದೂಬೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಅಧಿಕಾರಿಯನ್ನು ಬಂಧಿಸಲಾಗಿದೆ.
* ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ, ಜೆಎಂಎಂ ನಾಯಕಿ ಕಲ್ಪನಾ
ಸೊರೇನ್ ಅವರು ಸ್ಪರ್ಧಿಸಿರುವ ಗಾಂಡೇಯ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರ ಪ್ರಿಸೈಡಿಂಗ್ ಅಧಿಕಾರಿಯಾಗಿದ್ದ ಪ್ರಮೋದ್ ಕುಮಾರ್ ಅವರನ್ನು ಬದಲಾಯಿಸಿ, ಮತದಾನದ ಗೋಪ್ಯತೆಯನ್ನು ಕಾಪಾಡದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
* ಮಹಾರಾಷ್ಟ್ರದ ಬೀಡ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಬಾಳಾ ಸಾಹೇಬ್ ಶಿಂದೆ ಹೃದಯಾಘಾತದಿಂದ ಮತ ಗಟ್ಟೆಯಲ್ಲೇ ಕುಸಿದು ಮೃತಪಟ್ಟರು
* ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ರಾಜುರಾ ವಿಧಾನಸಭಾ ಕ್ಷೇತ್ರದಲ್ಲಿ ₹60 ಲಕ್ಷವನ್ನು
ವಶಪಡಿಸಿಕೊಳ್ಳಲಾಗಿದೆ
* ಅಣಕು ಮತದಾನದ ವೇಳೆ ದೋಷ ಕಾಣಿಸಿಕೊಂಡಮಹಾರಾಷ್ಟ್ರದ ಹಿಂಗೋಲಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿನ ಸುಮಾರು
21 ಇವಿಎಂಗಳನ್ನು ಬದಲಾಯಿಸ
ಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದರು
* ಮಹಾರಾಷ್ಟ್ರದ ಶ್ರೀರಾಂಪುರದಲ್ಲಿ ಶಿವಸೇನಾ ಅಭ್ಯರ್ಥಿ ಭೌಸಾಹೇಬ್ ಕಾಂಬ್ಳೆ ಅವರ ಕಾರಿನ ಮೇಲೆ ಬುಧವಾರ ಮುಂಜಾನೆ ಮೂವರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್: ಶೇ 68.45ರಷ್ಟು ಮತದಾನ
ರಾಂಚಿ (ಪಿಟಿಐ): ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆದ ಜಾರ್ಖಂಡ್‌ನ 38 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಸಂಜೆ 5 ಗಂಟೆಯವರೆಗೆ ಸುಮಾರು ಶೇ 68.45ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ಜಿಲ್ಲೆಗಳ 14,218 ಬೂತ್‌ಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಿತು. ಆದರೆ, 31 ಬೂತ್‌ಗಳಲ್ಲಿ ಸಂಜೆ 4 ಗಂಟೆಗೆ ಮತದಾನ ಮುಗಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 528 ಅಭ್ಯರ್ಥಿಗಳ ಅದೃಷ್ಟ ಮತಪೆಟ್ಟಿಗೆ ಸೇರಿದೆ. ಮೊದಲ ಹಂತದಲ್ಲಿ 43 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಮತ ಎಣಿಕೆ ಇದೇ 23ರಂದು ನಡೆಯಲಿದೆ.
ಜಮ್ತಾರಾ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ 77.29 ರಷ್ಟು ಮತದಾನವಾಗಿದೆ. ಪಾಕುರ್ ಶೇ 76.60, ದೇವಘರ್ ಶೇ 72.62 ಮತ್ತು ರಾಂಚಿ ಶೇ 72.04, ರಾಮಗಢ ಶೇ 72.41, ದುಮ್ಕಾ ಶೇ 71.99, ಗೊಡ್ಡಾ ಶೇ 68.51, ಸಾಹೇಬಗಂಜ್ ಶೇ 68.95, ಗಿರಿದಿಹ್ ಶೇ 66.41, ಹಜಾರಿಬಾಗ್ ಶೇ 64.97 ಮತ್ತು ಧನ್‌ಬಾದ್ ಶೇ 63.40 ಹಾಗೂ ಬೊಕಾರೊ ಜಿಲ್ಲೆಯಲ್ಲಿಶೇ 63.22ರಷ್ಟು ಮತದಾನವಾಗಿದೆ.
ಮಹಾರಾಷ್ಟ್ರ: ಶೇ 65.02ರಷ್ಟು ಮತ
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬುಧವಾರ ರಾತ್ರಿ 11.45ರವರೆಗಿನ ಮಾಹಿತಿ ಪ್ರಕಾರ ಶೇ 65.02ರಷ್ಟು ಮತದಾನವಾಗಿದೆ. ಕೊಲ್ಹಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು, ಶೇ 76 ಮತ್ತು ಗಢಚಿರೋಲಿ ಜಿಲ್ಲೆಯಲ್ಲಿ ಶೇ 73.68ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ನಗರದಲ್ಲಿ ಅತಿ ಕಡಿಮೆ ಅಂದರೆ, ಶೇ 52.07, ಮುಂಬೈ ಉಪನಗರ ಶೇ 55.77 ಹಾಗೂ ಠಾಣೆ ಜಿಲ್ಲೆಯಲ್ಲಿ ಶೇ 56.05ರಷ್ಟು ಮತದಾನವಾಗಿದೆ. ಸಾಂಗ್ಲಿ ಶೇ 71.89, ಸತಾರ ಶೇ 71.71, ಜಾಲ್ನಾ ಶೇ 72.30, ಹಿಂಗೋಲಿ ಶೇ 71.10, ಚಂದ್ರಾಪುರ ಶೇ 71.27, ಅಹಮದ್‌ನಗರ ಶೇ 71.73, ಪರ್ಬಾನಿ ಶೇ 70.38) ಹಾಗೂ ಬುಲ್ಧಾನದಲ್ಲಿ ಶೇ 70.32ರಷ್ಟು ಮತದಾನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.