ADVERTISEMENT

ಮಹಾರಾಷ್ಟ್ರದಲ್ಲಿ ನ.20, ಜಾರ್ಖಂಡ್‌ನಲ್ಲಿ ನ.13, 20ರಂದು ವಿಧಾನಸಭೆಗೆ ಮತದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2024, 17:28 IST
Last Updated 15 ಅಕ್ಟೋಬರ್ 2024, 17:28 IST
   

ನವದೆಹಲಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗವು ಮುಹೂರ್ತ ನಿಗದಿಪಡಿಸಿದೆ. ಮಹಾರಾಷ್ಟ್ರದಲ್ಲಿ ನವೆಂಬರ್‌ 20ರಂದು ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ ಎರಡು ಹಂತಗಳಲ್ಲಿ (ನವೆಂಬರ್‌ 13 ಹಾಗೂ 20) ಮತದಾನ ಜರುಗಲಿದೆ. ಬಿಜೆಪಿ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ಮತ್ತೊಂದು ಚುನಾವಣಾ ಕದನಕ್ಕೆ ವೇದಿಕೆ ಸಜ್ಜಾಗಿದೆ.   

ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ. 

ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮಂಗಳವಾರ ಇಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರು. ‘ಕರ್ನಾಟಕದ ಮೂರು ಸೇರಿದಂತೆ ವಿವಿಧ ರಾಜ್ಯಗಳ 47 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 13ರಂದು ಜರುಗಲಿದೆ. ನಾಂದೇಡ್‌ ಲೋಕಸಭಾ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ನ.20ರಂದು ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು. 

ADVERTISEMENT

ಮಹಾರಾಷ್ಟ್ರಕ್ಕಿಂತ ಚಿಕ್ಕದಾಗಿರುವ ಜಾರ್ಖಂಡ್‌ನಲ್ಲಿ ಒಂದೇ ಹಂತದಲ್ಲಿ ಏಕೆ ಚುನಾವಣೆ ನಡೆಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜೀವ್‌ ಕುಮಾರ್‌, ‘ಜಾರ್ಖಂಡ್‌ನಲ್ಲಿ 2019ರಲ್ಲಿ ಐದು ಹಂತಗಳಲ್ಲಿ ಮತದಾನ ನಡೆದಿತ್ತು. ಆದರೆ, ಈ ಸಲ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು. ರಾಜ್ಯದ ನಕ್ಸಲ್‌ ಪೀಡಿತ ಪ್ರದೇಶಗಳು ಹಾಗೂ ಸಂಬಂಧಿಸಿದ ಸಮಸ್ಯೆಗಳನ್ನು ಪರಿಗಣಿಸಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ’ ಎಂದು ಹೇಳಿದರು.

ಚುನಾವಣಾ ತಕರಾರು ಅರ್ಜಿಗಳು ಬಾಕಿ ಇರುವುದರಿಂದ ಪಶ್ಚಿಮ ಬಂಗಾಳದ ಬಸಿರ್‌ಹತ್ ಲೋಕಸಭೆ ಮತ್ತು ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಿಲ್ಲ ಎಂದು ಕುಮಾರ್ ಹೇಳಿದರು.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ಗಳಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಸಂಘಟನಾತ್ಮಕ ಬಲದ ನೆರವಿನಿಂದ ಬಿಜೆಪಿಯು ಚುನಾವಣೆಯಲ್ಲಿ ಅಚ್ಚರಿಯ ಜಯ ಗಳಿಸಿತ್ತು. ಅದೇ ಉಮೇದಿನಿಂದ ‘ಮಹಾ’ ಚುನಾವಣೆಗೆ ಪಕ್ಷ ಸಜ್ಜಾಗಿದೆ. ಕಾಂಗ್ರೆಸ್‌– ಶಿವಸೇನಾ (ಉದ್ಧವ್‌ ಠಾಕ್ರೆ ಬಣ)– ಎನ್‌ಸಿಪಿ (ಶರದ್‌ ಪವಾರ್ ಬಣ) ಒಳಗೊಂಡ ‘ಮಹಾವಿಕಾಸ ಅಘಾಡಿ’ಯು ಕಮಲ ಪಾಳಯಕ್ಕೆ ಸವಾಲು ಒಡ್ಡಲು ಸಜ್ಜಾಗಿದೆ. ಜಾರ್ಖಂಡ್‌ನಲ್ಲಿ ಇಂಡಿಯಾ ಮೈತ್ರಿಕೂಟವು ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ.

ಮತಗಟ್ಟೆ ಸಮೀಕ್ಷೆ: ಆತ್ಮಾವಲೋಕನಕ್ಕೆ ಕಿವಿಮಾತು

ಮತ ಎಣಿಕೆ ದಿನದಂದು ಆರಂಭಿಕ ಪ್ರವೃತ್ತಿಯನ್ನು ತೋರಿಸುವ ಸುದ್ದಿ ವಾಹಿನಿಗಳ ನಡೆಯನ್ನು ‘ಅಸಂಬದ್ಧ’ ಎಂದು ಟೀಕಿಸಿರುವ ರಾಜೀವ್‌ ಕುಮಾರ್‌, ‘ಇದು, ತಮ್ಮ ಚುನಾವಣೋತ್ತರ ಸಮೀಕ್ಷೆಯ ಲೋಪವನ್ನು ಮುಚ್ಚಿ ಹಾಕಲು ನಡೆಸುವ ಕಸರತ್ತೇ’ ಎಂದು ಪ್ರಶ್ನಿಸಿದರು. 

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ಹೇಳಿದ್ದವು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಅವರು ಮತಗಟ್ಟೆ ಸಮೀಕ್ಷೆಗಳು ಎಡವುತ್ತಿರುವುದನ್ನು ಬೊಟ್ಟು ಮಾಡಿ ತೋರಿಸಿದರು. ‘ನೈಜ ಫಲಿತಾಂಶಕ್ಕೆ ಹೊಂದಿಕೆಯಾಗದ ಮತ್ತು ಇಡೀ ಪ್ರಕ್ರಿಯೆಗೆ ಹಾನಿ ಮಾಡುವ ಮತಗಟ್ಟೆ ಸಮೀಕ್ಷೆಯಂತಹ ಅಭ್ಯಾಸಗಳ ಕುರಿತು ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಚುನಾವಣಾ ಆಯುಕ್ತರು ಕಿವಿಮಾತು ಹೇಳಿದರು. 

‘ನಿರೀಕ್ಷೆಗಳನ್ನು ಹೆಚ್ಚಿಸುವ ಮೂಲಕ ದೊಡ್ಡ ಗೊಂದಲ ಸೃಷ್ಟಿಸುವ’ ಮತಗಟ್ಟೆ ಸಮೀಕ್ಷೆಗಳನ್ನು ಆಯೋಗ ನಿಯಂತ್ರಿಸುವುದಿಲ್ಲ ಎಂದು ಒತ್ತಿ ಹೇಳಿದ ಅವರು, ಸುದ್ದಿ ಪ್ರಸಾರ ಹಾಗೂ ಡಿಜಿಟಲ್‌ ಮಾನದಂಡಗಳ ಪ್ರಾಧಿಕಾರದಂತಹ ಮಾಧ್ಯಮ ಸಂಸ್ಥೆಗಳು ಕೆಲವು ಸ್ವಯಂ ನಿಯಂತ್ರಣಗಳನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳಲ್ಲಿ (ಇವಿಎಂ) ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್‌ನ 20 ಅಭ್ಯರ್ಥಿಗಳ ಆರೋಪದ ಬಗ್ಗೆ ಆಯೋಗವು ವಿವರವಾದ ಪ್ರತಿಕ್ರಿಯೆ ನೀಡಲಿದೆ ಎಂದು ರಾಜೀವ್‌ ಕುಮಾರ್ ತಿಳಿಸಿದರು. ಇವಿಎಂ ಕುರಿತ ಕಾಂಗ್ರೆಸ್‌ ಆರೋಪವನ್ನು ತಳ್ಳಿ ಹಾಕಿದರು. ಮತ ಎಣಿಕೆಗೆ ಮೊದಲು ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್‌ಗಳು ಇವಿಎಂಗಳ ಪ್ರಶ್ನೆ ಎತ್ತಿರಲಿಲ್ಲ. ಅವುಗಳನ್ನು ಸಮಗ್ರವಾಗಿ ಪರಿಶೀಲಿಸಿ ಬಳಸಲಾಗಿದೆ ಎಂದರು. 

ನಗರ ಮತದಾರರ ನಿರಾಸಕ್ತಿ ಆಯೋಗ ಕಳವಳ

ಮತ ಚಲಾಯಿಸಲು ನಗರ ಪ್ರದೇಶದ ಜನರು ನಿರಾಸಕ್ತಿ ತೋರುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಜೀವ್‌ ಕುಮಾರ್‌, ‘ಬಸ್ತಾರ್‌, ಕಾಶ್ಮೀರದ ಜನರು ಉಮೇದಿನಿಂದ ಮತ ಚಲಾಯಿಸುತ್ತಾರೆ. ಆದರೆ, ಬೆಂಗಳೂರು ದಕ್ಷಿಣ, ಹೈದರಾಬಾದ್‌, ಗಾಂಧಿನಗರ, ಪುಣೆ, ಠಾಣೆಯಂತಹ ನಗರಗಳಲ್ಲಿ ಮತದಾನ ಪ್ರಮಾಣ ಸರಾಸರಿಗಿಂತ ಕಡಿಮೆ ಇದೆ. ಮತದಾನ ಮಾಡಲು ಅವರಿಗೆ ಇರುವ ಸಮಸ್ಯೆ ಏನು’ ಎಂದು ಪ್ರಶ್ನಿಸಿದರು. 

ನಗರ ಜನರ ನಿರಾಸಕ್ತಿ ಬಗ್ಗೆ ಉದಾಹರಣೆ ನೀಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೇ 73.84 ಮತದಾನ ಆಗಿತ್ತು. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ 47.5 ಮಂದಿ ಮತ ಚಲಾಯಿಸಿದ್ದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಜನತಂತ್ರದ ಹಬ್ಬದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು. ನಗರದ ಜನರ ನಿರಾಸಕ್ತಿ ಸಮಸ್ಯೆ ನಿವಾರಣೆಗೆ ಎರಡೂ ರಾಜ್ಯಗಳಲ್ಲಿ ವಾರದ ಮಧ್ಯ ದಿನವಾದ ಬುಧವಾರ ಚುನಾವಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.