ADVERTISEMENT

ಪತ್ನಿಯ ಹತ್ಯೆಗೆ ಯತ್ನ ಪ್ರಕರಣ: ವಕೀಲರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಪಿಟಿಐ
Published 19 ಮಾರ್ಚ್ 2021, 6:37 IST
Last Updated 19 ಮಾರ್ಚ್ 2021, 6:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಠಾಣೆ: 2010ರಲ್ಲಿ ಪತ್ನಿ ಕೊಲೆ ಯತ್ನ ‍ಪ್ರಕರಣದಡಿ ವಕೀಲರೊಬ್ಬರಿಗೆ ಠಾಣೆಯ ನ್ಯಾಯಾಲಯವು ಗುರುವಾರ 10 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ‍ಪಿ.ಪಿ ಜಾಧವ್‌ ಅವರು, ಬಿವಾಂಡಿ ‍ನಿವಾಸಿ ಅಹಮದ್‌ ಆಸಿಫ್‌ ಫಕೀಹ್‌ ಅವರಿಗೆ 10 ವರ್ಷದ ಕಠಿಣ ಜೈಲು ಶಿಕ್ಷೆ ಮತ್ತು ₹5,00,000 ದಂಡ ವಿಧಿಸಿದ್ದಾರೆ.

‘2001ರಲ್ಲಿ ವಿವಾಹವಾಗಿದ್ದ ಅಹಮದ್‌ ಅವರಿಗೆ ಮೂವರು ಮಕ್ಕಳಿದ್ದಾರೆ. ಮದುವೆಯ ಬಳಿಕ ಅಹಮದ್‌ ತನ್ನ ಪತ್ನಿಗೆ ಸದಾ ಹೊಡೆಯುತ್ತಿದ್ದರು. ಹಾಗಾಗಿ ಸಂತ್ರಸ್ತೆ ತನ್ನ ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದರು. ಅಹಮದ್‌ ವಿರುದ್ಧ ಸಂತ್ರಸ್ತೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಮಕ್ಕಳ ಕಸ್ಟಡಿಯನ್ನು ಕೂಡ ಕೋರಿದ್ದರು’ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕರಾದ ಹೇಮಲತ ದೇಶ್‌ಮುಖ್‌ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

‘2010ರ ಫೆಬ್ರುವರಿ 11 ರಲ್ಲಿ ಅಹಮದ್‌ ಪರ ವಕೀಲರ ಕಚೇರಿಯಲ್ಲಿ ಪ್ರಕರಣದ ಬಗ್ಗೆ ಚರ್ಚೆ ನಡೆಸುವಾಗ ಸಂತ್ರಸ್ತೆ ಮೇಲೆ ಅಹಮದ್‌ ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದ್ದಾನೆ. ಆದರೆ ಗನ್‌ ಸರಿಯಾಗಿ ಕೆಲಸ ಮಾಡದಿದ್ದರಿಂದ ಆತನಿಗೆ ಗುಂಡು ಹಾರಿಸಲು ಸಾಧ್ಯವಾಗಿಲ್ಲ. ‍ಪತ್ನಿ ಅಲ್ಲಿಂದ ‍ಪರಾರಿಯಾಗುವಷ್ಟರಲ್ಲಿ ಅಹಮದ್‌ ವಕೀಲರಿಬ್ಬರ ಮುಂದೆಯೇ ಸಂತ್ರಸ್ತೆ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ’ ಎಂದು ಅವರು ಹೇಳಿದರು.

ನ್ಯಾಯಾಲಯವು ತೀರ್ಪು ನೀಡುವ ವೇಳೆ ಅಹಮದ್‌ ಗೈರು ಹಾಜರಾಗಿದ್ದರು. ಹಾಗಾಗಿ ನ್ಯಾಯಾಲಯವು ಆತನ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.