ಪುಣೆ:ಹಣ ಕಂಡರೆ ಹೆಣವೂ ಬಾಯಿಬಿಡುತ್ತೆ ಅಂತ ಗಾದೆ ಮಾತಿದೆ. ಅಂಥದ್ರಲ್ಲಿ ಜೇಬಿನಲ್ಲಿ ಪುಡಿಕಾಸಿಲ್ಲದೆ ಅಂಗಲಾಚುವ ಪರಿಸ್ಥಿತಿಯಲ್ಲಿದ್ದಾಗಲೂ ವ್ಯಕ್ತಿಯೊಬ್ಬರು ತಮ್ಮ ಕೈಗೆ ಸಿಕ್ಕ ಬೇರೊಬ್ಬರ₹ 40 ಸಾವಿರ ಹಣವನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಅಪರೂಪದ ವಿದ್ಯಮಾನ ಮಹಾರಾಷ್ಟ್ರದಲ್ಲಿ ನಡೆದಿದೆ.
ಜೇಬಲ್ಲಿ ₹ 3 ಅಷ್ಟೇ ಇದ್ದರೂ ದೊಡ್ಡ ಮೊತ್ತದ ಹಣವನ್ನು ಮರಳಿಸಿ ಮಾದರಿಯಾದ ವ್ಯಕ್ತಿಮಹಾರಾಷ್ಟ್ರದ ಸತಾರದ 54 ವರ್ಷ ವಯಸ್ಸಿನ ಧನಾಜಿ ಜಗದಾಳೆ.
ಇವರ ಪ್ರಾಮಾಣಿಕತೆ ದೇಶ–ಭಾಷೆ ಗಡಿ ಮೀರಿದ ಮೆಚ್ಚುಗೆ ವ್ಯಕ್ತವಾಗಿದೆ. ಸಾವಿರಾರು ಮಂದಿ ಜಗದಾಳೆ ಅವರಿಗೆ ‘ಶಹಬ್ಬಾಸ್, ನಿಮಗೆ ನಮಸ್ಕಾರ. ನಿಮ್ಮಂಥವರು ಈ ದೇಶಕ್ಕೆ ಬೇಕು. ನೀವು ಎಲ್ಲರಿಗೂ ಮಾದರಿ’ಎಂದು ಹೇಳಿದ್ದಾರೆ.
ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುವಧನಾಜಿ ಅವರು ದೀಪಾವಳಿ ಹಬ್ಬದ ವೇಳೆ ಕೆಲಸಕ್ಕೆಂದು ತೆರಳಿದ್ದವರು ಸತಾರದ ಮಾನ್ ತಾಲ್ಲೂಕಿನ ಪಿಂಗಾಲಿ ಗ್ರಾಮದಲ್ಲಿರುವ ಮನೆಗೆ ವಾಪಸಾಗಲೆಂದು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಅವರ ಜೇಬಿನಲ್ಲಿ ಕೇವಲ ₹ 3 ಇತ್ತು. ತನ್ನೂರಿಗೆ ಮರಳಬೇಕಾದರೆ ಬಸ್ ಟಿಕೆಟ್ ಕೊಳ್ಳಲು ಅವರಿಗೆ ₹ 10ರ ಅಗತ್ಯವಿತ್ತು. ಉಳಿದ ₹ 7ಕ್ಕಾಗಿ ಯಾರಲ್ಲಿ ಕೇಳುವುದು ಎಂದು ಯೋಚಿಸುತ್ತಿರುವಾಗಲೇ ಆ ನೋಟಿನ ಕಟ್ಟು ಅವರ ಕಣ್ಣಿಗೆ ಬಿತ್ತು!
‘ಬಸ್‌ಗಾಗಿ ಕಾಯುತ್ತಿದ್ದಾಗ ನೋಟಿನ ಕಟ್ಟೊಂದು ಬಿದ್ದಿರುವುದು ಕಾಣಿಸಿತು. ಅದು ಯಾರದ್ದೆಂದು ಅಕ್ಕಪಕ್ಕ ಇದ್ದವರಲ್ಲಿ ವಿಚಾರಿಸಿದೆ. ಅಷ್ಟರಲ್ಲಿ ವ್ಯಕ್ತಿಯೊಬ್ಬರು ಹತಾಶೆಯಿಂದ ಏನೋ ಹುಡುಕುತ್ತಿರುವುದು ಕಾಣಿಸಿತು. ಬಳಿಕ ಆ ಹಣ ಅವರಿಗೆ ಸೇರಿದ್ದೆಂಬುದು ತಿಳಿಯಿತು. ಪತ್ನಿಯ ಶಸ್ತ್ರಚಿಕಿತ್ಸೆಗೆಂದು ಆ ಹಣ ಒಯ್ಯುತ್ತಿದ್ದುದಾಗಿಯೂ ಆ ಕಟ್ಟಿನಲ್ಲಿ ₹ 40 ಸಾವಿರ ಇದೆಯೆಂದೂ ಅವರು ತಿಳಿಸಿದರು. ನಾನದನ್ನು ಅವರಿಗೆ ನೀಡಿದೆ. ಅವರು ಸಂತೋಷದಿಂದ ₹ 1,000 ಬಹುಮಾನವಾಗಿ ನೀಡಲು ಮುಂದಾದರು. ನಾನು ಬೇಡವೆಂದೆ. ಬದಲಿಗೆ ಬಸ್ ಟಿಕೆಟ್‌ಗೆ ಅಗತ್ಯವಿದ್ದ ₹ 7 ಮಾತ್ರ ಪಡೆದುಕೊಂಡೆ’ ಎಂದು ನಡೆದ ವಿದ್ಯಮಾನವನ್ನು ವಿವರಿಸಿದ್ದಾರೆಧನಾಜಿ.
ಈ ಪ್ರಾಮಾಣಿಕತೆಗಾಗಿ ಧನಾಜಿ ಅವರನ್ನು ಸತಾರದ ಬಿಜೆಪಿ ಶಾಸಕ ಶಿವೇಂದ್ರಾಜೆ ಭೋಸ್ಲೆ ಮತ್ತು ಕೆಲವು ಸಂಘಟನೆಗಳು ಸನ್ಮಾನಿಸಿವೆ. ಆದರೆ, ಅವರು ನೀಡಿರುವ ನಗದು ಬಹುಮಾನವನ್ನು ಸ್ವೀಕರಿಸಲು ಧನಾಜಿ ನಿರಾಕರಿಸಿದ್ದಾರೆ.
ಸದ್ಯ ಅಮೆರಿಕದಲ್ಲಿ ನೆಲೆಸಿರುವ, ಕೋರೆಗಾಂವ್ ತೆಹ್ಸಿಲ್‌ನ ರಾಹುಲ್ ಬರ್ಗೆ ಎಂಬುವವರು ಧನಾಜಿಗೆ ₹ 5 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಅದನ್ನೂ ಧನಾಜಿ ತಿರಸ್ಕರಿಸಿದ್ದಾರೆ.
‘ಬೇರೆಯವರ ಹಣವನ್ನು ತೆಗೆದುಕೊಳ್ಳುವುದರಿಂದ ತೃಪ್ತಿ ದೊರೆಯದು. ಜನರು ಪ್ರಾಮಾಣಿಕವಾಗಿ ಬದುಕಬೇಕು ಎಂಬ ಸಂದೇಶವನ್ನು ಕಳುಹಿಸುವುದಷ್ಟೇ ನನ್ನ ಉದ್ದೇಶ’ ಎಂದು ಧನಾಜಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.