ಮುಂಬೈ: ಸುಮಾರು 36 ಗಂಟೆಗಳಿಗೂ ಹೆಚ್ಚು ಕಾಲ ಅಜ್ಞಾತವಾಸದಲ್ಲಿದ್ದ ಪಾಲ್ಗರ್‌ನ ಶಿವಸೇನಾ ಶಾಸಕ ಶ್ರೀನಿವಾಸ್ ವಂಗಾ ಅವರು ಪತ್ತೆಯಾಗಿದ್ದು, ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದ್ದಕ್ಕೆ ಶ್ರೀನಿವಾಸ ನೊಂದಿದ್ದರು. ಸೋಮವಾರ ಸಂಜೆಯಿಂದ ಶ್ರೀನಿವಾಸ್ ಕಾಣಿಸದ ಕಾರಣ ಕುಟುಂಬದವರು ಹುಡುಕಾಟ ನಡೆಸಿದ್ದರೂ ಅವರು ಪತ್ತೆಯಾಗಲಿಲ್ಲ.
2022ರ ಜುಲೈನಲ್ಲಿ ಶ್ರೀನಿವಾಸ್ ಅವರು ಶಿವಸೇನಾ ಪಕ್ಷ ಇಬ್ಬಾಗವಾದಾಗ ಪಕ್ಷದಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಏಕನಾಥ ಶಿಂದೆ ಬಣಕ್ಕೆ ಬೆಂಬಲ ನೀಡಿದ್ದರು. ಆದರೆ, ಶಿವಸೇನಾ ಪಕ್ಷ, ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಬಂಡಾಯವೆದ್ದಾಗ ಶಿಂದೆ ಅವರ ಪರವಾಗಿ ನಿಂತ ಮಾಜಿ ಸಂಸದ ರಾಜೇಂದ್ರ ಗವಿತ್‌ಗೆ ಟಿಕೆಟ್ ನೀಡಿದೆ. ಟಿಕೆಟ್ ಕೈ ತಪ್ಪಿದ್ದಕ್ಕೆ ಶ್ರೀನಿವಾಸ್ ನೊಂದಿದ್ದರು ಎನ್ನಲಾಗಿದೆ.
ಶ್ರೀನಿವಾಸ್ ಅವರು ನಾಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ ಅವರ ಪತ್ನಿಯನ್ನು ಸಂಪರ್ಕಿಸಿದ ಮುಖ್ಯಮಂತ್ರಿ ಶಿಂದೆ, ಶ್ರೀನಿವಾಸ್ ಅವರನ್ನು ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಶ್ರೀನಿವಾಸ್ ಅವರು ಬಿಜೆಪಿಯ ಮಾಜಿ ಸಂಸದ ಚಿಂತಾಮನ್ ವಂಗಾ ಅವರ ಪುತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.