ಮುಂಬೈ:ಮಹಾರಾಷ್ಟ್ರ ವಿಧಾನ ಪರಿಷತ್ತಿನ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದ ಎಲ್ಲ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಐದು ಸ್ಥಾನಗಳಿಗೆ ಬಿಜೆಪಿಯಿಂದ ಪ್ರವೀಣ್ ದಾರೆಕರ್, ಪ್ರೊ. ರಾಮ್ ಶಿಂದೆ, ಉಮಾ ಖಾಪ್ರೆ, ಶ್ರೀಕಾಂತ್ ಭಾರತೀಯ ಹಾಗೂ ಪ್ರಸಾದ್ ಲಾಡ್ ಸ್ಪರ್ಧಿಸಿದ್ದರು.
ಆಡಳಿತಾರೂಢ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಐವರು ಮಾತ್ರ ಜಯಗಳಿಸಿದ್ದಾರೆ.
ಶಿವಸೇನಾದ ಇಬ್ಬರು ಅಭ್ಯರ್ಥಿಗಳು (ಸಚಿನ್ ಅಹಿರ್ ಮತ್ತು ಅಮಾಷ್ಯ ಪಡ್ವಿ) ಹಾಗೂ ಎನ್‌ಸಿಪಿಯ ಇಬ್ಬರು ಅಭ್ಯರ್ಥಿಗಳು (ರಾಮ್‌ರಾಜೆ ನಾಯಕ್ ನಿಂಬಾಳ್ಕರ್ ಹಾಗೂ ಏಕನಾಥ ಖಡ್ಸೆ) ಗೆಲುವು ಸಾಧಿಸಿದರೆ, ಕಾಂಗ್ರೆಸ್‌ನಿಂದ ಭಾಯಿ ಜಗ್‌ತಾಪ್ ವಿಜಯ ಸಾಧಿಸಿದರು.
ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲುವು ಖಚಿತಪಡಿಸಿಕೊಂಡಿದ್ದರು.
ಬಿಜೆಪಿಯ ಇಬ್ಬರು ಶಾಸಕರು ಅನಾರೋಗ್ಯದಿಂದಾಗಿ ಸಹಾಯಕರ ನೆರವಿನಿಂದ ಮತ ಚಲಾಯಿಸಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಇವರ ಮತಗಳನ್ನು ತಿರಸ್ಕರಿಸುವಂತೆ ಒತ್ತಡ ಹೇರಿತ್ತು. ಇದರಿಂದ ಮತ ಎಣಿಕೆ ಎರಡು ತಾಸು ವಿಳಂಬವಾಗಿ ಶುರುವಾಯಿತು. 10 ಸ್ಥಾನಗಳಿಗೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದರು.
‘ಪಕ್ಷದ ಎಲ್ಲ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಭರವಸೆ ನಮಗಿತ್ತು. ಫಲಿತಾಂಶವು ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಹೆಚ್ಚಿನ ಅಸಮಾಧಾನ ಇರುವುದನ್ನು ಸೂಚಿಸುತ್ತದೆ’ ಎಂದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.