ADVERTISEMENT

ಮಹಾರಾಷ್ಟ್ರದ ಔರಂಗಬಾದ್‌, ಉಸ್ಮಾನಾಬಾದ್‌ಗೆ ಮರುನಾಮಕರಣ : ಕೇಂದ್ರದಿಂದಲೂ ಸಮ್ಮತಿ

ಪಿಟಿಐ
Published 25 ಫೆಬ್ರುವರಿ 2023, 2:48 IST
Last Updated 25 ಫೆಬ್ರುವರಿ 2023, 2:48 IST
ದೇವೇಂದ್ರ ಫಡಣವೀಸ್‌ ಮತ್ತು ಏಕನಾಥ ಶಿಂದೆ
ದೇವೇಂದ್ರ ಫಡಣವೀಸ್‌ ಮತ್ತು ಏಕನಾಥ ಶಿಂದೆ    

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ನಗರವನ್ನು `ಛತ್ರಪತಿ ಸಂಭಾಜಿ ನಗರ' ಮತ್ತು ಉಸ್ಮಾನಾಬಾದ್ ನಗರವನ್ನು `ಧಾರಾಶಿವ' ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಮೊಘಲ್ ದೊರೆ ಔರಂಗಜೇಬನ ಹೆಸರನ್ನು ಔರಂಗಾಬಾದ್‌ಗೆ ಇಡಲಾಗಿತ್ತು. ಹೈದರಾಬಾದ್‌ನ 7 ನೇ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಹೆಸರನ್ನು ಉಸ್ಮಾನಾಬಾದ್‌ಗೆ ಇಡಲಾಗಿತ್ತು. ಈ ಪ್ರದೇಶವು 1948ರವರೆಗೆ ಹೈದರಾಬಾದ್‌ ಸಂಸ್ಥಾನದ ಭಾಗವಾಗಿತ್ತು.

ADVERTISEMENT

ಸದ್ಯ ಔರಂಗಬಾದ್‌ಗೆ ಛತ್ರಪತಿ ಸಾಂಭಾಜಿ ನಗರ ಎಂದು ಮರುನಾಮಕರಣ ಮಾಡಲಾಗಿದೆ. ಸಂಭಾಜಿಯು ಛತ್ರಪತಿ ಶಿವಾಜಿಯ ಹಿರಿಯ ಮಗ. ತನ್ನ ತಂದೆ ಸ್ಥಾಪಿಸಿದ ಮರಾಠ ರಾಜ್ಯದ ಎರಡನೇ ರಾಜನೂ ಹೌದು. 1689 ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಸಂಭಾಜಿಯನ್ನು ಗಲ್ಲಿಗೇರಿಸಲಾಗಿತ್ತು.

ಇನ್ನು ಧಾರಾಶಿವ ಎಂಬುದು ಉಸ್ಮಾನಾಬಾದ್ ಬಳಿಯ ಗುಹೆಗಳ ಹೆಸರು. ಇವು 5 ರಿಂದ 8 ನೇ ಶತಮಾನದಷ್ಟು ಹಳೆಯವು ಎಂದು ನಂಬಲಾಗಿದೆ.

ಹಿಂದೂ ಬಲಪಂಥೀಯ ಸಂಘಟನೆಗಳು ಎರಡು ನಗರಗಳ ಹೆಸರು ಬದಲಾಯಿಸಲು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದವು. ಅದರಂತೆ ಈಗ ಹೆಸರು ಬದಲಾಯಿಸಲಾಗಿದ್ದು, ಕೇಂದ್ರದಿಂದಲೂ ಸಮ್ಮತಿ ದೊರೆತಿದೆ. ಈ ಸಂಬಂಧ ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯದಿಂದ ಬಂದ ಎರಡು ಪತ್ರಗಳನ್ನು ಫಡ್ನವೀಸ್ ಅವರು ಫೆಬ್ರುವರಿ 24 ರಂದು ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಎರಡು ನಗರಗಳ ಹೆಸರು ಬದಲಾವಣೆಗೆ ಕೇಂದ್ರದ ಅಭ್ಯಂತರವಿಲ್ಲ ಎಂದು ಪತ್ರಗಳಲ್ಲಿ ತಿಳಿಸಲಾಗಿದೆ. ಈ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಫಡ್ನವೀಸ್ ಧನ್ಯವಾದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.