ಔರಂಗಾಬಾದ್: ಐದು ವರ್ಷಗಳಲ್ಲಿ ಸುಮಾರು ಐದು ಸಾವಿರ ಗರ್ಭಿಣಿಯರಿಗೆ ಸುಗಮ ಪ್ರಸವಕ್ಕೆ ನೆರವಾಗಿದ್ದ ಮಹಾರಾಷ್ಟ್ರದ ದಾದಿಯೊಬ್ಬರು, ತಾವೇ ಮಗುವಿಗೆ ಜನ್ಮ ನೀಡುವ ವೇಳೆ ಉಂಟಾದ ತೊಡಕುಗಳಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಿಂಗೋಲಿ ಜಿಲ್ಲೆಯ ಜ್ಯೋತಿ ಗವಳಿ(38) ಹೆರಿಗೆ ವೇಳೆ ಮೃತಪಟ್ಟ ದಾದಿ. ಜ್ಯೋತಿ ಅವರು ನವೆಂಬರ್ 2ರಂದು ಹಿಂಗೋಲಿಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇದೇ ವೇಳೆ ಅವರಿಗೆ ಬೈಲ್ಯಾಟರಲ್ ನಿಮೋನಿಯಾ ಮತ್ತು ಇತರೆ ತೊಂದರೆಗಳು ಕಾಣಿಸಿಕೊಂಡವು. ನಂತರ ವೈದ್ಯರ ಸಲಹೆ ಮೇರೆಗೆ ಜಿಲ್ಲೆಯ ನಾಂದೇಡ್‌ನ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದರು.
‘ಜ್ಯೋತಿ ಅವರು ಇದೇ ಹಿಂಗೋಲಿ ಜಿಲ್ಲಾಸ್ಪತ್ರೆಯ ಪ್ರಸವ ವಿಭಾಗಕ್ಕೆ ನಿಯೋಜನೆಗೊಂಡಿದ್ದರು. ಗರ್ಭಾವಸ್ಥೆಯ ಕೊನೆಯ ದಿನದವರೆಗೂ ಆಸ್ಪತ್ರೆಯಲ್ಲಿ ಕೆಲಸ ಮಾಡಿ, ನಂತರ ಹೆರಿಗೆಗೆ ತೆರಳಿದ್ದರು. ಪ್ರಸವದ ನಂತರ ’ಹೆರಿಗೆ ರಜೆ’ ಪಡೆಯಲು ಯೋಜಿಸಿದ್ದರು’ ಎಂದು ಹಿಂಗೋಲಿ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ ಗೋಪಾಲ್ ಕದಮ್ ಸುದ್ದಿಸಂಸ್ಥೆಗೆ ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಅವರು, ಇದಕ್ಕೂ ಮುನ್ನ ಅವರು ಎರಡು ಆರೋಗ್ಯ ಕೇಂದ್ರಗಳಲ್ಲಿಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.