ಮುಂಬೈ: ಮಹಾರಾಷ್ಟ್ರದ ಹಿಂದುಳಿದ ವರ್ಗಗಳ ಆಯೋಗವು, ಮರಾಠ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತ ಸಮೀಕ್ಷಾ ವರದಿಯನ್ನು ಶುಕ್ರವಾರ ಸಲ್ಲಿಸಿತು ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಸಮಿತಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಸುನಿಲ್ ಶುಕ್ರೆ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ವರದಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇದ್ದರು ಎಂದು ತಿಳಿಸಿದೆ.
ಸಮೀಕ್ಷಾ ವರದಿ ಕುರಿತು ಸಚಿವ ಸಂಪುಟದೊಂದಿಗೆ ಚರ್ಚಿಸುವುದಾಗಿ ಶಿಂದೆ ತಿಳಿಸಿದ್ದಾರೆ ಎಂದೂ ಹೇಳಿದೆ.
ಜೊತೆಗೆ ‘ಅಸ್ತಿತ್ವದಲ್ಲಿರರುವ ಮೀಸಲಾತಿಗೆ ಯಾವುದೇ ಅಡ್ಡಿ ಮಾಡದೆ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು. ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡುತ್ತಿದೆ. ಹೋರಾಟಗಾರ ಮನೋಜ್ ಜರಾಂಗೆ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಬೇಕು’ ಎಂದು ಮುಖ್ಯಮಂತ್ರಿ ಶಿಂದೆ ಮನವಿ ಮಾಡಿದ್ದಾರೆ ಎಂದೂ ತಿಳಿಸಿದೆ.
ಜ.23ರಿಂದ ರಾಜ್ಯದಾದ್ಯಂತ ಸಮೀಕ್ಷೆ ಆರಂಭಿಸಲಾಗಿತ್ತು. 2.25 ಕೋಟಿ ಕುಟುಂಬಗಳನ್ನು ಆಧರಿಸಿ 3.5ರಿಂದ 4 ಲಕ್ಷ ಸರ್ಕಾರಿ ಸಿಬ್ಬಂದಿಗಳು ಈ ಸಮೀಕ್ಷೆ ನಡೆಸಿದ್ದಾರೆ.
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸುತ್ತಿರುವ ಸಮುದಾಯದ ಬೇಡಿಕೆ ಕುರಿತು ಚರ್ಚಿಸಲು ಫೆ.20ರಂದು ಸರ್ಕಾರ ವಿಶೇಷ ಅಧಿವೇಶನ ಕರೆದಿದೆ.
ಈ ಮಧ್ಯೆ ಜರಾಂಗೆ ಅವರಿಗೆ ಬೆಂಬಲ ಸೂಚಿಸಿ ಸಮುದಾಯದ ಕೆಲ ಸದಸ್ಯರು ಶುಕ್ರವಾರ ಪುಣೆ ಸಮೀಪದ ಪುಣೆ–ಸೋಲಾಪುರ ಹೆದ್ದಾರಿ ತಡೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.