ಮುಂಬೈ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮನೋಜ್ ಜರಾಂಗೆ ಅವರು ಬೀಡ್ ನಗರದ 25 ಸ್ಥಳಗಳಲ್ಲಿ ರಸ್ತೆ ತಡೆ ನಡೆಸಲು ಜನರನ್ನು ಪ್ರಚೋದಿಸಿದ್ದಾರೆ. ಇದರಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿ ಜನರು ತೊಂದರೆ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಂಗೆ ವಿರುದ್ಧ ಐಪಿಸಿ ಸೆಕ್ಷನ್ 341, 143, 145, 149, 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಂದಕುಮಾರ್ ಠಾಕೂರ್ ತಿಳಿಸಿದ್ದಾರೆ.
ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶವುಳ್ಳ ‘ಮರಾಠ ಮೀಸಲಾತಿ ಮಸೂದೆ’ಗೆ ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆತಿರುವುದನ್ನು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಸ್ವಾಗತಿಸಿದ್ದರು.
‘ಈಗ ಸರ್ಕಾರ ನೀಡಿರುವ ಮೀಸಲಾತಿ ಪ್ರಮಾಣವು ನಮ್ಮ ಬೇಡಿಕೆಗೆ ಅನುಗುಣವಾಗಿಲ್ಲ. ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿಯನ್ನು ಕೈಬಿಡದಿರಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದರು.
‘ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಜರಾಂಗೆ ಇತ್ತೀಚೆಗೆ ಆರೋಪಿಸಿದ್ದರು.
‘ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಕೆಲವು ಜನರನ್ನು ಒತ್ತಾಯಿಸಲಾಗುತ್ತಿದೆ. ಈ ಸಂಚಿನ ಹಿಂದೆ ಫಡಣವೀಸ್ ಅವರಿದ್ದಾರೆ. ನಾನು ಮುಂಬೈವರೆಗೆ ಮೆರವಣಿಗೆ ಹೋಗಿ, ಫಡಣವೀಸ್ ಅವರ ಸಾಗರ್ ಬಂಗಲೆಯ ಮುಂದೆ ಪ್ರತಿಭಟನೆ ನಡೆಸಲು ಕೂಡ ಸಿದ್ಧನಿದ್ಧೇನೆ’ ಎಂದು ತಿಳಿಸಿದ್ದರು.
ಜಾರಂಗೆ ಆರೋಪಗಳಿಗೆ ತಿರುಗೇಟು ನೀಡಿದ್ದ ಬಿಜೆಪಿ ಶಾಸಕ ನಿತೇಶ್ ರಾಣೆ, ‘ಫಡಣವೀಸ್ ಅವರನ್ನು ಮುಟ್ಟಬೇಕಾದರೆ ಅವರ ಕಾರ್ಯಕರ್ತರ ಬೃಹತ್ ಗೋಡೆಯನ್ನು ದಾಟಿ ಹೋಗಬೇಕಿದೆ. ಮೀಸಲಾತಿ ಹೋರಾಟಗಾರ ಇದೀಗ ಸ್ಕ್ರೀಪ್ಟ್ ಓದುತ್ತಿದ್ದಾರೆ’ ಎಂದಿದ್ದರು.
‘ಮರಾಠ ಸಮುದಾಯಕ್ಕೆ ರಾಜ್ಯ ಸರ್ಕಾರ ಶೇ10ರಷ್ಟು ಮೀಸಲಾತಿ ನೀಡಿದ ಮೇಲೂ ಯಾಕೆ ಪ್ರತಿಭಟನೆ ಮುಂದುವರಿಸುತ್ತಿದ್ದಾರೆ? ಫಡಣವೀಸ್ ಅವರು 5 ವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಏನು ಅಂತ ಜನರಿಗೆ ಗೊತ್ತಿದೆ. ಜಾರಂಗೆ ಅವರ ಪೊಳ್ಳು ಆರೋಪಗಳಿಂದ ಫಡಣವೀಸ್ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲ. ಜಾರಂಗೆ ನಿಜ ಬಣ್ಣ ಈಗ ಬಯಲಾಗುತ್ತಿದೆ’ ಎಂದು ಬಿಜೆಪಿ ಶಾಸಕ ಅತುಲ್ ಭಟ್ಕಳಕರ್ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.