ಮುಂಬೈ:ಶಿವಸೇನಾದ ನಾಯಕ ಏಕನಾಥ ಶಿಂಧೆ ಅವರ ಬಂಡಾಯದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಆರೋಪಿಸಿದ್ದಾರೆ.
ಬಹುಮತದ ನಿಜವಾದ ಪರೀಕ್ಷೆ ಸದನದಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಬಂಡಾಯವನ್ನು ರಾಷ್ಟ್ರೀಯ ಪಕ್ಷವೊಂದು ಬೆಂಬಲಿಸಿದೆ ಎಂಬ ಶಿಂಧೆ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಪವಾರ್, ‘ಚುನಾವಣಾ ಆಯೋಗ ಮಾನ್ಯ ಮಾಡಿರುವ ರಾಷ್ಟ್ರೀಯ ಪಕ್ಷಗಳ ಪಟ್ಟಿ ಇಲ್ಲಿದೆ ನೋಡಿ. ಬಿಜೆಪಿ, ಬಿಎಸ್‌ಪಿ, ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಹಾಗೂ ಎನ್‌ಸಿಪಿ. ಈ ಪೈಕಿ ಬಂಡಾಯದ ಹಿಂದಿರುವುದು ಯಾವ ಪಕ್ಷ? ಬಿಎಸ್‌ಪಿಯೋ, ಕಾಂಗ್ರೆಸ್ಸೋ, ಸಿಪಿಐ, ಸಿಪಿಐ(ಎಂ) ಅಥವಾ ಎನ್‌ಸಿಪಿಯೋ’ ಎಂದು ಪ್ರಶ್ನಿಸಿದ್ದಾರೆ.
‘ಶಿವಸೇನಾದ ಬಂಡಾಯ ನಾಯಕರನ್ನು ಗುಜರಾತ್‌ಗೆ ಹಾಗೂ ಅಸ್ಸಾಂಗೆ ಕರೆದೊಯ್ದವರು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ನೆರವು ನೀಡುತ್ತಿರುವ ಎಲ್ಲರ ಹೆಸರನ್ನು ನಾವು ಹೇಳಬೇಕಾದ ಅಗತ್ಯವೂ ಇಲ್ಲ. ಅಸ್ಸಾಂ ಸರ್ಕಾರವೂ ಅವರಿಗೆ ನೆರವಾಗಿದೆ’ ಎಂದು ಪವಾರ್ ಹೇಳಿದ್ದಾರೆ.
ಈ ಮಧ್ಯೆ,ಸರ್ಕಾರ ಕೈತಪ್ಪಿದರೂ ಪಕ್ಷವನ್ನು ಉಳಿಸಿಕೊಳ್ಳಬೇಕು ಎಂಬ ನಿಲುವಿಗೆ ಬಂದಿರುವ ಶಿವಸೇನಾಆಡಳಿತಾರೂಢ ಮಹಾ ವಿಕಾಸ ಆಘಾಡಿ ಮೈತ್ರಿಕೂಟದಿಂದ ಹೊರ ನಡೆಯಲು ಸಿದ್ಧ ಎಂದು ಹೇಳಿದೆ.ಆದರೆ, ಅಸ್ಸಾಂನಲ್ಲಿ ತಂಗಿರುವ ಸೇನಾ ಶಾಸಕರು 24 ಗಂಟೆಯೊಳಗೆ ಮುಂಬೈಗೆ ಬರಬೇಕು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.