ಮುಂಬೈ:ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ (ಎಂವಿಎ)’ ಸರ್ಕಾರ ಉಳಿಸಲು ಪ್ರಯತ್ನಿಸಿದರೆ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರನ್ನು ಮನೆಗೆ ಹೋಗಲು ಬಿಡುವುದಿಲ್ಲ ಎಂದು ಕೇಂದ್ರ ಸಚಿವರೊಬ್ಬರು ಬೆದರಿಕೆಯೊಡ್ಡಿರುವುದಾಗಿ ಶಿವಸೇನಾ ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಶರದ್ ಪವಾರ್ ಅವರಂತಹ ನಾಯಕರ ವಿರುದ್ಧ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರಧಾನಿ ಕಾರ್ಯಾಲಯವನ್ನು ಟ್ಯಾಗ್ ಮಾಡಿ ಉಲ್ಲೇಖಿಸಿದ್ದಾರೆ.
‘ಮಹಾ ವಿಕಾಸ್ ಅಘಾಡಿ ಸರ್ಕಾರ ಉಳಿಸಲು ಮುಂದಾದರೆ ಶರದ್ ಪವಾರ್ ಮನೆಗೆ ಹೋಗಲು ಬಿಡುವುದಿಲ್ಲ, ದಾರಿಯಲ್ಲೇ ತಡೆಯುತ್ತೇವೆ ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ. ಸರ್ಕಾರ ಉಳಿಯುತ್ತದೆ ಅಥವಾ ಉರುಳುತ್ತದೆ. ಆದರೆ ಶರದ್ ಪವಾರ್ ಅವರಂಥ ನಾಯಕರ ವಿರುದ್ಧ ಇಂಥ ಹೇಳಿಕೆ ಸ್ವೀಕಾರಾರ್ಹವಲ್ಲ’ ಎಂದು ಸಂಜಯ್ ರಾವುತ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶಿವಸೇನಾ ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ರಾಜಕೀಯ ಆರೋಪ, ಪ್ರತ್ಯಾರೋಪಗಳೂ ಜೋರಾಗಿವೆ. ಈ ಮಧ್ಯೆ, ಕೇಂದ್ರ ಸಚಿವರ ಹೆಸರು ಉಲ್ಲೇಖಿಸದೆಯೇ ರಾವುತ್ ಆರೋಪ ಮಾಡಿದ್ದಾರೆ.
ಶಿವಸೇನಾದ ನಾಯಕ ಏಕನಾಥ ಶಿಂಧೆ ಅವರ ಬಂಡಾಯದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಗುರುವಾರ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.