ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಬೆಂಬಲಕ್ಕೆ ಕೇವಲ 15 ಶಾಸಕರು ಮತ್ತು ನಾಲ್ವರು ಸಚಿವರು ನಿಂತಿದ್ದಾರೆ.
ಒಟ್ಟು 55 ಶಾಸಕರನ್ನು ಹೊಂದಿರುವ ಶಿವಸೇನಾದ 40 ಶಾಸಕರು ಉದ್ಧವ್ ವಿರುದ್ಧ ಬಂಡಾಯ ಎದ್ದಿದ್ದಾರೆ.
ಠಾಣೆಯ ಪ್ರಬಲ ಬಂಡಾಯ ನಾಯಕ ಏಕನಾಥ ಶಿಂಧೆ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಶಿಂಧೆ ಪರವಾಗಿ 40 ಶಾಸಕರು ನಿಂತಿದ್ದಾರೆ.
ದಿವಂಗತ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ 56 ವರ್ಷದ ಹಳೆಯ ಪಕ್ಷವನ್ನು ಉಳಿಸುವ ಅನಿವಾರ್ಯತೆ ಉದ್ಧವ್ ಠಾಕ್ರೆಗೆ ಬಂದೊದಗಿದೆ.
ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯಾದಾಗ, ಶಿವಸೇನೆಯು 10 ಕ್ಯಾಬಿನೆಟ್ ಸ್ಥಾನಗಳನ್ನು ಹೊಂದಿತ್ತು. ಇದರಲ್ಲಿ ಅರಣ್ಯ ಸಚಿವರಾಗಿದ್ದ ಸಂಜಯ ರಾಥೋಡ್ ಅವರು ಫೆಬ್ರವರಿ 2021 ರಲ್ಲಿ ರಾಜೀನಾಮೆ ನೀಡಬೇಕಾಯಿತು.
ಈಗ ಉಳಿದಿರುವ 9 ಸಚಿವರಲ್ಲಿ ಐವರು ಶಿಂಧೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಶಿವಸೇನೆಯು ವಿಧಾನ ಪರಿಷತ್ತಿನಲ್ಲಿ 14 ಸದಸ್ಯರನ್ನು ಹೊಂದಿದ್ದು, ಇದರಲ್ಲಿ ಯಾವುದೇ ಒಡಕು ಕಾಣಿಸಿಕೊಂಡಿಲ್ಲ.
ಸದ್ಯ, ಠಾಕ್ರೆ ಅವರು ಸಾಮಾನ್ಯ ಆಡಳಿತ, ಕಾನೂನು ಮತ್ತು ನ್ಯಾಯಾಂಗ, ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಖಾತೆಗಳನ್ನು ಹೊಂದಿದ್ದಾರೆ.
ಪರಿಸರ ಹಾಗೂ ಪ್ರವಾಸೋದ್ಯಮ ಖಾತೆಗಳನ್ನು ಉದ್ಧವ್ ಪುತ್ರ ಆದಿತ್ಯ ಹೊಂದಿದ್ದಾರೆ. ಸುಭಾಷ ದೇಸಾಯಿ, ಕೈಗಾರಿಕೆಗಳು, ಗಣಿಗಾರಿಕೆ ಮತ್ತು ಮರಾಠಿ ಭಾಷಾ ಸಚಿವರಾಗಿದ್ದಾರೆ. ಅನಿಲ್ ಪರಬ್ ಅವರು ಸಾರಿಗೆ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾರೆ. ಈ ಮೂವರು ಸಚಿವರು ಉದ್ಧವ್ ಪರ ಇದ್ದಾರೆ.
ಠಾಕ್ರೆ, ದೇಸಾಯಿ ಮತ್ತು ಪರಬ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಆದಿತ್ಯ ಠಾಕ್ರೆ ಮಾತ್ರ ಶಾಸಕರಾಗಿದ್ದಾರೆ. ಅಲ್ಲದೆ, ಮುಂದಿನ ತಿಂಗಳು ದೇಸಾಯಿ ಅವರ ಎಂಎಲ್‌ಸಿ ಅಧಿಕಾರಾವಧಿ ಕೊನೆಗೊಳ್ಳಲಿದೆ.
ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಮತ್ತು ಇತರ ಸಚಿವರ ಖಾತೆಗಳನ್ನು ಹಿಂಪಡೆದಿರುವ ಉದ್ಧವ್, ಮಂತ್ರಿ ಪರಿಷತ್ತಿನ ಇತರೆ ಸಚಿವರಿಗೆ ಹಂಚಿಕೆ ಮಾಡಿದ್ದಾರೆ.
ಶಿಂಧೆ ಅವರ ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ ಖಾತೆಯನ್ನು ಶಿವಸೇನೆಯ ಹಿರಿಯ ಮುಖಂಡ ಸುಭಾಷ್ ದೇಸಾಯಿ ಅವರಿಗೆ ಹಂಚಿಕೆ ಮಾಡಲಾಗಿದೆ. ಗುಲಾಬ್ ರಾವ್ ಪಾಟೀಲ್ ಅವರ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆಯನ್ನು ಅನಿಲ್ ಪರಬ್ ಅವರಿಗೆ ಹಸ್ತಾಂತರಿಸಲಾಗಿದೆ.
ಮಹಾರಾಷ್ಟ್ರದಲ್ಲಿನ ಬಲಾಬಲ
288 ಸದಸ್ಯರನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ 55 ಶಾಸಕರ ಬಲ ಹೊಂದಿದೆ. ಎನ್‌ಸಿಪಿ 53, ಕಾಂಗ್ರೆಸ್‌ನ 44, ಬಹುಜನ ವಿಕಾಸ ಆಘಾಡಿ 3, ಸಮಾಜವಾದಿ ಪಕ್ಷ, ಎಐಎಂಐಎಂ ಹಾಗೂ ಪ್ರಹಾರ್ ಜನಶಕ್ತಿ ಪಾರ್ಟಿಯ ತಲಾ ಇಬ್ಬರು ಶಾಸಕರಿದ್ದಾರೆ.
ಎಂಎನ್‌ಎಸ್, ಸಿಪಿಐ (ಎಂ), ಪಿಡಬ್ಲ್ಯುಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಾರ್ಟಿ, ಜನಸೂರ್ಯ ಶಕ್ತಿ ಪಾರ್ಟಿ ಹಾಗೂ ಕ್ರಾಂತಿಕಾರಿ ಶೆತಕರಿ ಪಕ್ಷದಿಂದ ತಲಾ ಒಬ್ಬರು ಶಾಸಕರಿದ್ದಾರೆ. 13 ಮಂದಿ ಪಕ್ಷೇತರ ಶಾಸಕರು ಹಾಗೂ ವಿರೋಧ ಪಕ್ಷ ಬಿಜೆಪಿಯಲ್ಲಿ 106 ಶಾಸಕರಿದ್ದಾರೆ.
ಇವನ್ನೂ ಓದಿ
*ಮಹಾರಾಷ್ಟ್ರ: ಬಂಡಾಯ ಶಾಸಕನ ಕಚೇರಿ ಧ್ವಂಸಗೊಳಿಸಿದ ಶಿವಸೇನಾ ಕಾರ್ಯಕರ್ತರು
*ಮಹಾರಾಷ್ಟ್ರ ಬಿಕ್ಕಟ್ಟು | ಶಿವಸೇನಾದ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ: ಶಿಂಧೆ
*ನಾವೇ ನಿಜವಾದ ಶಿವಸೇನಾ, ಬಾಳಾ ಸಾಹೇಬ್ ನಿಷ್ಠರು: ಬಂಡಾಯ ನಾಯಕ ಶಿಂಧೆ
*ಬಂಡಾಯ ಶಾಸಕರ ಅನರ್ಹತೆಗೆ ಕ್ರಮ: ಶಿವಸೇನಾ ನಾಯಕ ಸಂಜಯ್ ರಾವುತ್
*ಸರ್ಕಾರ ಉಳಿಸಲು ಮುಂದಾದರೆ ಪವಾರ್ ಮನೆಗೆ ಹೋಗಲು ಬಿಡಲ್ಲ ಎಂದ ಕೇಂದ್ರ ಸಚಿವ: ಆರೋಪ
*‘ಒಬ್ಬ ದುಷ್ಟ ರಾಜ’: ಟ್ವೀಟ್ ಮೂಲಕ ಉದ್ಧವ್ ಠಾಕ್ರೆಯನ್ನು ಕೆಣಕಿದ ಅಮೃತಾ ಫಡಣವೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.