ಮುಂಬೈ: ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ ಬಂಡೆದ್ದು ಬಿಜೆಪಿ ಬೆಂಬಲಿಸಿದ್ದ ಅಜಿತ್ ಪವಾರ್ ಬುಧವಾರ ವಿಧಾನಸಭಾ ಪ್ರವೇಶಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತುಸು ಸಿಟ್ಟಿನಿಂದಲೇ, ‘ನಾನು ಎಂದಿಗೂ ಎನ್‌ಸಿಪಿ ಬಿಟ್ಟಿರಲಿಲ್ಲ. ನನ್ನನ್ನು ಎನ್‌ಸಿಪಿಯಿಂದ ಹೊರಗೂ ಹಾಕಿರಲಿಲ್ಲ’ ಎಂದರು.
‘ನಾನು ಎಂದೂ ಪಕ್ಷ ತೊರೆದಿರಲಿಲ್ಲ. ನಾನು ಈ ಹಿಂದೆ, ಈಗ ಮತ್ತು ಮುಂದೆ ಎನ್‌ಸಿಪಿ ಜೊತೆಗೆ ಇರುತ್ತೇನೆ. ಕಳೆದ ಕೆಲ ದಿನಗಳಿಂದ ಮಾಧ್ಯಮಗಳು ನನ್ನ ಬಗ್ಗೆ ತಪ್ಪಾಗಿ ವರದಿ ಮಾಡಿದ್ದವು. ಈ ಎಲ್ಲದರ ಬಗ್ಗೆಯೂ ಸೂಕ್ತಕಾಲದಲ್ಲಿ ಪ್ರತಿಕ್ರಿಯಿಸುತ್ತೇನೆ’ ಎಂದು ವಿಧಾನಸಭೆಯಲ್ಲಿಶಾಸಕರ ಪ್ರಮಾಣ ವಚನ ಕಲಾಪ ಆರಂಭವಾಗುವುದಕ್ಕೂ ಮುನ್ನ ಹೇಳಿದರು.
ಇದಕ್ಕೂ ಮೊದಲುವರಸೆಯಲ್ಲಿ ಅಣ್ಣನಾಗಬೇಕಾದ ಅಜಿತ್ ಪವಾರ್ ಅವರನ್ನು ಸುಪ್ರಿಯಾ ಸುಳೆ ಪ್ರೀತಿಯಿಂದ ಆಲಂಗಿಸಿ ಅಧಿವೇಶನಕ್ಕೆ ಸ್ವಾಗತಿಸಿದರು. ಅಜಿತ್ ಪವಾರ್‌ರ ಪಾದ ಮುಟ್ಟಿ ನಮಸ್ಕರಿಸಿದರು.
ಕಳೆದ ಶನಿವಾರ ಅಜಿತ್ ಪವಾರ್ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರಿಗೆ ಬೆಂಬಲ ಘೋಷಿಸಿದ್ದರು. ಮಾತ್ರವಲ್ಲ, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದರು.
ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರ ಮಂಗಳವಾರ ಅಜಿತ್ ಪವಾರ್ ಮತ್ತು ದೇವೇಂದ ಫಡಣವೀಸ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ನಂತರ ಅಜಿತ್ ಪವಾರ್ ತಮ್ಮ ಚಿಕ್ಕಪ್ಪನೂ ಆಗಿರುವ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಬುಧವಾರ ರಾತ್ರಿ ಭೇಟಿಯಾಗಿದ್ದರು.
‘ರೈತರ ಹಿತ ಕಾಪಾಡುವ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ಸೂಚಿಸಿದ್ದೆ’ ಎಂದು ಅಜಿತ್ ಪವಾರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.
ಅಜಿತ್ ಪವಾರ್ ಜೊತೆಗೆ ಮಾತುಕತೆ ನಡೆಸಿದ ಅವರನ್ನುಮತ್ತೆ ಪಕ್ಷದ ತೆಕ್ಕೆಗೆ ತರಲು ಶರದ್ ಪವಾರ್ ಪಕ್ಷದ ಹಿರಿಯ ನಾಯಕರಾದ ಛಗನ್ ಭುಜಬಲ್, ಜಯಂತ್ ಪಾಟೀಲ್, ದಿಲೀಪ್ ವಾಸ್ಲೆ ಮತ್ತು ಸುನಿಲ್ ತತ್ಕರೆ ಅವರನ್ನು ನಿಯೋಜಿಸಿದ್ದರು.
ತಮ್ಮ ಸೋದರ ಸಂಬಂಧಿಯಿಂದ ದೂರವೇ ಉಳಿದಿದ್ದ ಶರದ್ ಪವಾರ್, ಪಕ್ಷದಿಂದ ದೂರ ಸರಿದಿದ್ದ ಶಾಸಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಶನಿವಾರ ಮಧ್ಯಾಹ್ನದ ನಂತರ ಶಾಸಕರು ಒಬ್ಬೊಬ್ಬರಾಗಿ ಮುಂಬೈಗೆ ಹಿಂದಿರುಗಿದರು. ಸರ್ಕಾರ ರಚಿಸುವ ಬಿಜೆಪಿಯ ಆಸೆ ನೆರವೇರುವುದಿಲ್ಲ ಎಂಬುದು ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುವ ಹೊತ್ತಿಗೆ ನಿಚ್ಚಳವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.