ಮುಂಬೈ: ಮಹಾರಾಷ್ಟ್ರದ ನೂತನ ಸರ್ಕಾರದಲ್ಲಿ ಸಚಿವರ ಖಾತೆ ಹಂಚಿಕೆ ಅಂತಿಮಗೊಳ್ಳುವವರೆಗೂ ಮಹಾಯುತಿ ಮೈತ್ರಿಕೂಟ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ನೂತನ ಮುಖ್ಯಮಂತ್ರಿ ಘೋಷಣೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಇದರಿಂದಾಗಿ ನೂತನ ಮುಖ್ಯಮಂತ್ರಿ ಯಾರೆಂದು ನಿರ್ಧರಿಸಲು ‘ಮಹಾಯುತಿ’ ಮೈತ್ರಿಕೂಟ ಮತ್ತಷ್ಟು ಸಮಯ ತೆಗೆದುಕೊಳ್ಳಲು ಸಾಧ್ಯತೆ ಇದೆ ಎನ್ನಲಾಗಿದೆ.
ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಪಕ್ಷದ ಹೈಕಮಾಂಡ್ ಮೇಲೆ ಯಾವುದೇ ಒತ್ತಡವಿಲ್ಲ. ನಾವು ಸ್ಪಷ್ಟ ಜನಾದೇಶವನ್ನು ಪಡೆದುಕೊಂಡಿದ್ದೇವೆ. ಸರ್ಕಾರ ರಚನೆಗೆ ಸಮಗ್ರ ಯೋಜನೆ ರೂಪಿಸುವುದು ಅತಿಮುಖ್ಯ. ಹಾಗಾಗಿ ನೂತನ ಸಚಿವರ ಖಾತೆ ಹಂಚಿಕೆಯನ್ನು ಮೊದಲು ಅಂತಿಮಗೊಳಿಸುತ್ತೇವೆ. ಬಳಿಕ ಮುಖ್ಯಮಂತ್ರಿ ಯಾರು ಎಂಬುದನ್ನು ಘೋಷಿಸುತ್ತೇವೆ ಎಂದು ಬಿಜೆಪಿ ನಾಯಕರೊಬ್ಬರು ‘ಪಿಟಿಐ’ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ಸಂಬಂಧ ‘ಮಹಾಯುತಿ’ ಮೈತ್ರಿಕೂಟದಲ್ಲಿ ಮಂಗಳವಾರವೂ ಒಮ್ಮತ ಮೂಡದ ಕಾರಣ ಹೊಸ ಸರ್ಕಾರ ರಚನೆ ವಿಳಂಬವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದ ‘ಮಹಾಯುತಿ’ ಮೈತ್ರಿಕೂಟದ ನಾಯಕರು ಎರಡು ದಿನಗಳಿಂದ ಚರ್ಚಿಸಿದರೂ, ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಲಿಲ್ಲ.
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆದಿತ್ತು. ನವೆಂಬರ್ 23ರಂದು ಎಣಿಕೆ ನಡೆದಿದ್ದು, ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 236 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು 49 ಕ್ಷೇತ್ರ ಗೆಲುವು ಸಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.