ADVERTISEMENT

ಮಹಾರಾಷ್ಟ್ರ ರಾಜಕೀಯ: ಮಾಜಿ ಸಿಎಂ ಅಶೋಕ್ ಚವ್ಹಾಣ್ ಬಿಜೆಪಿಗೆ ಸೇರ್ಪಡೆ

ಮೃತ್ಯುಂಜಯ ಬೋಸ್
Published 13 ಫೆಬ್ರುವರಿ 2024, 6:48 IST
Last Updated 13 ಫೆಬ್ರುವರಿ 2024, 6:48 IST
<div class="paragraphs"><p>ಅಶೋಕ್‌ ಚವ್ಹಾಣ್‌</p></div>

ಅಶೋಕ್‌ ಚವ್ಹಾಣ್‌

   

ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಅಶೋಕ್‌ ಚವ್ಹಾಣ್‌ (65) ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಅವರ ಸಮ್ಮುಖದಲ್ಲಿ ಚವ್ಹಾಣ್‌ ಬಿಜೆಪಿಗೆ ಸೇರಿದ್ದಾರೆ.

ADVERTISEMENT

‘ನಾನು ಇಂದು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. ನನ್ನ ಮತ್ತು ಕಾಂಗ್ರೆಸ್ ನಡುವಿನ ಅಧ್ಯಾಯ ಮುಗಿದಿದೆ. ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ’ ಎಂದು ಚವ್ಹಾಣ್‌ ಹೇಳಿದರು.

ಅಶೋಕ್‌ ಚವ್ಹಾಣ್‌ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಅವರಿಗೆ ಪತ್ರದ ಮೂಲಕ ಚವ್ಹಾಣ್‌ ತಿಳಿಸಿದ್ದರು. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಅವರು, ರಾಜ್ಯ ವಿಧಾನಸಭೆಯ ಸ್ಪೀಕರ್‌ ರಾಹುಲ್ ನಾರ್ವೇಕರ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ಚವ್ಹಾಣ್‌ ಅವರು ರಾಜ್ಯದ ಮರಾಠವಾಡ ಪ್ರದೇಶದ ನಾಂದೇಡ್ ಜಿಲ್ಲೆಯಿಂದ ಎರಡು ಬಾರಿ ಸಂಸದರಾಗಿ ಮತ್ತು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಚವ್ಹಾಣ್‌ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಚೆನ್ನಿತ್ತಲ, ‘ಇದು ನಮಗೆ ಆಘಾತವಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯ ಹಗರಣಗಳು, ಆರ್ಥಿಕ ಸ್ಥಿತಿಗತಿ ಕುರಿತ ಶ್ವೇತಪತ್ರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಚೆಗೆ ಸಂಸತ್ತಿನಲ್ಲಿ ಮಂಡಿಸಿದ್ದರು. ಅದರಲ್ಲಿ ‘ಆದರ್ಶ್‌ ವಸತಿ ಹಗರಣ’ವನ್ನೂ ಹೆಸರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚವ್ಹಾಣ್‌ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ವಾದಗಳನ್ನು ಚವ್ಹಾಣ್‌ ನಿರಾಕರಿಸಿದ್ದಾರೆ. ಲೋಕಸಭೆ ಚುನಾವಣೆ ಸನ್ನಿಹಿತ ಆಗುತ್ತಿರುವ ವೇಳೆಯೇ ಚವ್ಹಾಣ್‌ ಅವರು ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್‌ಗೆ ಹಿನ್ನೆಡೆಯಾಗಲಿದೆ ಎನ್ನಲಾಗಿದೆ.

ಆದರ್ಶ್‌ ವಸತಿ ಹಗರಣದ ಕಾರಣಕ್ಕಾಗಿ ಚವ್ಹಾಣ್‌ ಅವರು 2010ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.