ಮುಂಬೈ/ದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡಿದ್ದ ಎನ್‌ಸಿಪಿಯ ಅಜಿತ್ ಪವಾರ್ ಜತೆಗೆ ಗುರುತಿಸಿಕೊಂಡಿದ್ದ ಪಕ್ಷದ ನಾಲ್ವರು ಶಾಸಕರನ್ನು ದೆಹಲಿಯಿಂದ ಸಿನಿಮೀಯ ರೀತಿಯಲ್ಲಿ ‘ಹಾರಿಸಿಕೊಂಡು’ ಬರಲಾಯಿತು ಎಂದು ಎನ್‌ಸಿಪಿ ನಾಯಕರು ಹೇಳಿದ್ದಾರೆ. ಕಾಣೆಯಾಗಿದ್ದ ಶಾಸಕರನ್ನು‘ರಕ್ಷಿಸಿ’ಕೊಂಡು ಬಂದ ಬಗೆಯನ್ನು ಎನ್‌ಸಿಪಿಯ ನಾಯಕರು ವಿವರಿಸಿದ್ದಾರೆ.
ಅಜಿತ್ ಜತೆ ಗುರುತಿಸಿಕೊಂಡಿದ್ದ ಎನ್‌ಸಿಪಿ ಶಾಸಕರಾದ ದೌಲತ್ ದರೊಡಾ, ಅನಿಲ್ ಪಾಟಿಲ್, ನಿತಿನ್ ಪವಾರ್ ಮತ್ತು ನರಹರಿ ಜಿರ್ವಾಲ್ ಅವರನ್ನು ಶನಿವಾರವೇ ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲಾಗಿತ್ತು.ಅವರನ್ನು ಗುರುಗ್ರಾಮದ ಪಂಚತಾರಾ ಹೋಟೆಲ್ ಒಂದರಲ್ಲಿ ಇರಿಸಲಾಗಿತ್ತು.
‘ಈ ನಾಲ್ವರಲ್ಲಿ ಒಬ್ಬ ಶಾಸಕ, ‘ನಮ್ಮನ್ನು ದೆಹಲಿಯ ಉದ್ಯೋಗ ವಿಹಾರದ ಹೋಟೆಲ್ ಒಂದರಲ್ಲಿ ಒತ್ತಾಯವಾಗಿ ಇರಿಸಿಕೊಳ್ಳಲಾಗಿದೆ’ ಎಂದು ಶರದ್ ಪವಾರ್ ಅವರಿಗೆ ಶನಿವಾರ ತಡರಾತ್ರಿ ಎಸ್‌ಎಂಎಸ್ ಮಾಡಿದ್ದರು. ಆನಂತರ ಅವರನ್ನು ಅಲ್ಲಿಂದ ರಕ್ಷಿಸಿಕೊಂಡು ಬರುವ ಕಾರ್ಯತಂತ್ರ ಹೂಡಲಾಯಿತು’ ಎಂದು ಎನ್‌ಸಿಪಿ ಯುವ ಘಟಕದ ಅಧ್ಯಕ್ಷ ಧೀರಜ್ ಶರ್ಮಾ ಮಾಹಿತಿ ನೀಡಿದ್ದಾರೆ.
ಎನ್‌ಸಿಪಿಯ ಯುವ ಘಟಕ ಮತ್ತು ವಿದ್ಯಾರ್ಥಿ ಘಟಕದ ಸದಸ್ಯರು ಸೇರಿ, ಈ ಕಾರ್ಯಾಚರಣೆ ನಡೆಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವಹಿಸಿದ ಎನ್‌ಸಿಪಿ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಸೋನಿಯಾ ದೂಹನ್ ಅವರಿಗೆ ಈಗ ಪಕ್ಷದಲ್ಲಿ ತಾರಾ ಮೆರುಗು ಲಭಿಸಿದೆ.
‘ಶಾಸಕರು ದೆಹಲಿಯಲ್ಲಿ ಇದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣವೇ ಅವರನ್ನು ಅಲ್ಲಿಂದ ಕರೆದುಕೊಂಡು ಬರಲು ಕಾರ್ಯತಂತ್ರ ರೂಪಿಸಲಾಯಿತು. ಇದಕ್ಕಾಗಿ ತಲಾ 100 ಜನ ಇದ್ದ ಎರಡು ತಂಡಗಳನ್ನು ರಚಿಸಲಾಯಿತು. ಈ ತಂಡಗಳು ಭಾನುವಾರ ಬೆಳಿಗ್ಗೆಯ ಹೊತ್ತಿಗೆ ದೆಹಲಿ ತಲುಪಿದ್ದವು. ನಮ್ಮ ಶಾಸಕರನ್ನು ಇರಿಸಿಕೊಂಡಿದ್ದ ಹೋಟೆಲ್ ಅನ್ನು ಪತ್ತೆ ಮಾಡಲಾಯಿತು’ ಎಂದು ಸೋನಿಯಾ ವಿವರಿಸಿದ್ದಾರೆ.
‘ನಮ್ಮ ಶಾಸಕರನ್ನು ಉಳಿಸಿಕೊಂಡಿದ್ದ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಜೆಪಿಯ 150ಕ್ಕೂ ಹೆಚ್ಚು ಕಾರ್ಯಕರ್ತರು ಕಾವಲು ಕಾಯುತ್ತಿದ್ದರು. ಆ ತಂಡಗಳಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೂ ಮಫ್ತಿಯಲ್ಲಿ ಇದ್ದರು. ಹೀಗಾಗಿ ನಾವು ಹೋಟೆಲ್ ಒಳಗೆ ಹೋಗಲು ಸಾಧ್ಯವಾಗಲಿಲ್ಲ’ ಎಂದು ಸೋನಿಯಾ ವಿವರಿಸಿದ್ದಾರೆ.
‘ಮಧ್ಯಾಹ್ನದ ವೇಳೆಗೆ ನಾಲ್ವರು ಶಾಸಕರನ್ನೂ ಬಿಜೆಪಿ ಕಾರ್ಯಕರ್ತರು ಹೊರಗೆ ಕರೆತಂದರು. ಅವರನ್ನು ಹತ್ತಿರದ ರೆಸ್ಟೋರೆಂಟ್ ಒಂದಕ್ಕೆ ಕರೆದೊಯ್ದರು. ಎನ್‌ಸಿಪಿಯ ಒಂದು ತಂಡ ಅವರನ್ನು ಹಿಂಬಾಲಿಸಿತು. ಆದರೆ, ರೆಸ್ಟೋರೆಂಟ್‌ನಲ್ಲಿ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮತ್ತೆಎಲ್ಲರೂ ಹೋಟೆಲ್‌ಗೆ ಹಿಂತಿರುಗಿದರು’ ಎಂದು ಸೋನಿಯಾ ವಿವರಿಸಿದ್ದಾರೆ.
‘ಮಧ್ಯಾಹ್ನದ ನಂತರ ಸೋನಿಯಾ ಸೇರಿದಂತೆ ಎನ್‌ಸಿಪಿಯ ಐವರು ಅದೇ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿ, ಒಳಗೆ ಹೋದರು. ರಾತ್ರಿ ವೇಳೆಗೆ ನಮ್ಮ ಶಾಸಕರ ಜತೆ ಸಂಪರ್ಕ ಸಾಧ್ಯವಾಯಿತು. ಅಷ್ಟರಲ್ಲಿ ನಮ್ಮ ತಂಡದ ಹಲವು ಸದಸ್ಯರು ಹೋಟೆಲ್ ಒಳಹೊಕ್ಕಿ, ಸಾಮಾನ್ಯರಂತೆ ತಿರುಗಾಡುತ್ತಿದ್ದರು. ಬಿಜೆಪಿ ಕಾರ್ಯಕರ್ತರ ಕಣ್ಣುತಪ್ಪಿಸಿರಾತ್ರಿ 10.30ಕ್ಕೆ ಒಬ್ಬ ಶಾಸಕನನ್ನು ಹೊರಗೆ ಕರೆತರಲಾಯಿತು. ಅಷ್ಟರಲ್ಲೇ ಬಿಜೆಪಿಯ ಅಷ್ಟೂ ಕಾರ್ಯಕರ್ತರು ಊಟಕ್ಕೆ ಕುಳಿತರು. ಆ ಸಮಯವನ್ನು ಬಳಸಿಕೊಂಡು 11.30ರಷ್ಟರಲ್ಲಿ ಇನ್ನೂ ಇಬ್ಬರು ಶಾಸಕರನ್ನು ಹೊರಗೆ ಕರೆತಂದೆವು. ಮೂವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದೆವು. 2.30ಕ್ಕೆ ಮುಂಬೈ ಕಡೆಗೆ ಹೊರಟೆವು’ ಎಂದು ಧೀರಜ್ ಶರ್ಮಾ ವಿವರಿಸಿದ್ದಾರೆ.
‘ಆರೋಗ್ಯ ಸರಿ ಇಲ್ಲದ ಕಾರಣ ನರಹರಿ ಜಿರ್ವಾಲ್ ಅವರನ್ನು ರಾತ್ರಿಯೇ ಕರೆತರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇನ್ನೂ ಒಂದು ತಂಡ ದೆಹಲಿಯಲ್ಲೇ ಉಳಿದಿತ್ತು. ಸೋಮವಾರ ಬೆಳಗಿನ ಜಾವ 4.30ರ ವೇಳೆಗೆ ನರಹರಿ ಅವರನ್ನು ಹೋಟೆಲ್‌ನಿಂದ ಹೊರಗೆ, ನಂತರ ಮುಂಬೈಗೆ ಕರೆತರಲಾಯಿತು’ ಎಂದು ಧೀರಜ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.