ADVERTISEMENT

ಮಹಾರಾಷ್ಟ್ರ ರಾಜಕೀಯ | ಬಿಜೆಪಿ ವಿಫಲವಾದ್ರೆ ನಾವು ಹಕ್ಕು ಮಂಡಿಸ್ತೇವೆ: ಶಿವಸೇನಾ

170 ಶಾಸಕರ ಬೆಂಬಲ ಇದೆ ಎಂದ ಸಂಜಯ್ ರಾವತ್

ಏಜೆನ್ಸೀಸ್
Published 4 ನವೆಂಬರ್ 2019, 6:47 IST
Last Updated 4 ನವೆಂಬರ್ 2019, 6:47 IST
   

ಮುಂಬೈ:ಮಹಾರಾಷ್ಟ್ರ ಸರ್ಕಾರ ರಚನೆ ಕಗ್ಗಂಟು ಮುಂದುವರಿದಿರುವ ನಡುವೆಯೇ ಸರ್ಕಾರ ರಚನೆಗೆ ಬಿಜೆಪಿ ವಿಫಲವಾದರೆ ತಾನು ಹಕ್ಕುಮಂಡಿಸುವುದಾಗಿ ಶಿವಸೇನಾ ಹೇಳಿದೆ.

ನಮಗೆ 170 ಶಾಸಕರ ಬೆಂಬಲವಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ನಮ್ಮನ್ನು ಬೆಂಬಲಿಸುವ ಸಾಧ್ಯತೆ ಇದೆ. ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸುವಂತೆ ರಾಜ್ಯಪಾಲರ ಬಳಿ ಮನವಿ ಮಾಡಲಾಗುವುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.

‘ಹಿಂಬಾಗಿಲ ಮಾತುಕತೆ ಪ್ರಶ್ನೆಯೇ ಇಲ್ಲ. ಬಿಕ್ಕಟ್ಟು ಸೃಷ್ಟಿಯಾಗಿರುವುದಕ್ಕೆ ನಾವು ಕಾರಣವಲ್ಲ. ಬಿಜೆಪಿ ಮೊದಲು ಸರ್ಕಾರ ರಚನೆಗೆ ಹಕ್ಕು ಮಂಡಿಸಬೇಕು. ಅವರು ವಿಫಲವಾದ್ರೆ ನಾವು ಹಕ್ಕು ಮಂಡಿಸುತ್ತೇವೆ’ ಎಂದು ರಾವತ್ ಹೇಳಿದ್ದಾರೆ. ಎನ್‌ಸಿಪಿ ನಾಯಕ ಮತ್ತು ಶರದ್‌ ಪವಾರ್‌ ಅವರ ಸಂಬಂಧಿ ಅಜಿತ್‌ ಪವಾರ್‌ ಅವರಿಗೆ ಶಿವಸೇನೆಯ ನಾಯಕ ಸಂಜಯ್‌ ರಾವುತ್‌ ಭಾನುವಾರ ಸಂದೇಶ ಕಳುಹಿಸಿದ್ದು ರಾಜ್ಯ ರಾಜಕೀಯ ತಿರುವು ಪಡೆಯುವ ಸುಳಿವು ನೀಡಿತ್ತು.

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಶಿವಸೇನಾ ನಾಯಕರು ಈವರೆಗೆ ಎರಡು ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

‘ಮಹಾ’ರಾಜಕಾರಣ ದೆಹಲಿಗೆ ಶಿಫ್ಟ್:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ಮಾತುಕತೆ ಈಗ ದೆಹಲಿ ಅಂಗಳ ತಲುಪಿದೆ. ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಲು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ದೆಹಲಿಗೆ ತೆರಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಮತ್ತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಇಂದು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.