ADVERTISEMENT

ಮಹಾರಾಷ್ಟ್ರ | ನಾಳೆಯಿಂದ ಅಧಿವೇಶನ: ಉದ್ಧವ್ ಠಾಕ್ರೆ ಎದುರು ಸವಾಲು ಸಾಲುಸಾಲು

ಮೃತ್ಯುಂಜಯ ಬೋಸ್
Published 15 ಡಿಸೆಂಬರ್ 2019, 8:05 IST
Last Updated 15 ಡಿಸೆಂಬರ್ 2019, 8:05 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಬಲಿಷ್ಠ ವಿರೋಧ ಪಕ್ಷ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆಗಳು ಉದ್ಧವ್ ಠಾಕ್ರೆ ನೇತೃತ್ವದ ‘ಮಹಾ ವಿಕಾಸ ಅಘಾಡಿ’ ಮೈತ್ರಿಸರ್ಕಾರಕ್ಕೆ ಸಂಕಷ್ಟ ತಂದೊಡ್ಡುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ನಾಗಪುರದಲ್ಲಿ ನಾಳೆಯಿಂದ (ಡಿ.16) ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯಲಿದೆ.

ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜೊತೆಗೂಡಿ ರಚಿಸಿರುವ ಮೈತ್ರಿ ಸರ್ಕಾರ ಮುನ್ನಡೆಸುತ್ತಿರುವ ಉದ್ಧವ್‌ ಠಾಕ್ರೆಗೆ ಸಂಪುಟ ರಚನೆಯ ನಂತರ ಒಗ್ಗಟ್ಟು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ.

ADVERTISEMENT

ನವೆಂಬರ್ 28ರಂದು ಉದ್ಧವ್ ಠಾಕ್ರೆ 6 ಸಚಿವರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೈತ್ರಿಯ ಮೂರೂ ಪಕ್ಷಗಳಿಂದ ತಲಾ ಇಬ್ಬರು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಡಿಸೆಂಬರ್ 12ರವರೆಗೆ ಖಾತೆ ಹಂಚಿಕೆ ಮಾಡಿರಲಿಲ್ಲ. ಪ್ರಮಾಣವಚನ ಸ್ವೀಕರಿಸಿದ 15 ದಿನಗಳ ನಂತರ ಖಾತೆ ಹಂಚಿಕೆ ಮಾಡಲಾಯಿತು.

ಸೈದ್ಧಾಂತಿಕವಾಗಿ ಎರಡು ಧ್ರುವಗಳಾಗಿರುವ ಶಿವಸೇನಾ ಮತ್ತು ಕಾಂಗ್ರೆಸ್‌–ಎನ್‌ಸಿಪಿ ನಡುವಣ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ಖಾತೆ ಹಂಚಿಕೆಯ ವೇಳೆಯೇರವಾನೆಯಾಗಿತ್ತು.

ಎರಡು ಬಾರಿ ಮುಖ್ಯಮಂತ್ರಿಯಾಗಿರುವ, ಈಗ ವಿರೋಧ ಪಕ್ಷದ ನಾಯಕನಾಗಿರುವ ದೇವೇಂದ್ರ ಫಡಣವೀಸ್‌ ಮೈತ್ರಿ ಸರ್ಕಾರವನ್ನು ಮಣಿಸಲು ಲಭ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಿದ್ದಾರೆ.

ಆದರೆ ಬಿಜೆಪಿಯಲ್ಲಿಯೂ ಎಲ್ಲವೂ ಸರಿಯಾಗಿಲ್ಲ. ಏಕನಾಥ್ ಖಾಡ್ಸೆ ಮತ್ತು ಪಂಕಜಾ ಮುಂಡೆ (ದಿವಂಗತ ಗೋಪಿನಾಥ ಮುಂಡೆ ಪುತ್ರಿ) ಅವರಿಗೆ ಪಕ್ಷವು ಹಿಂದೆ ಅಧಿಕಾರದಲ್ಲಿದ್ದಾಗ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎನ್ನುವ ಅಸಮಾಧಾನವಿದೆ.

ರಾಹುಲ್ ಗಾಂಧಿ ನೀಡಿರುವ ‘ನಾನು ರಾಹುಲ್ ಸಾವರ್ಕರ್ ಅಲ್ಲ’ ಎನ್ನುವ ಹೇಳಿಕೆಯು ಹೊಸ ಮಿತ್ರ ಪಕ್ಷ ಶಿವಸೇನಾದ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ನಾಳೆಯ ಅಧಿವೇಶನದಲ್ಲಿ ಚರ್ಚೆ ನಡೆದರೂ ಅಚ್ಚರಿಯಿಲ್ಲ.

‘ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ನಾನು ರಾಹುಲ್ ಗಾಂಧಿ. ಸತ್ಯ ಹೇಳಿದ್ದಕ್ಕಾಗಿ ನಾನಾಗಲೀ, ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತನಾಗಲೀಎಂದಿಗೂ ಕ್ಷಮೆ ಕೇಳುವುದಿಲ್ಲ. ನರೇಂದ್ರ ಮೋದಿ ಮತ್ತು ಅವರ ಸಹಾಯಕ ಅಮಿತ್‌ ಶಾ ದೇಶದ ಆರ್ಥಿಕತೆ ಹಾಳು ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕು’ ರಾಹುಲ್ ಗಾಂಧಿ ಪಕ್ಷದ ಮೆಗಾ ರ‍್ಯಾಲಿ ಉದ್ದೇಶಿಸಿ ಮಾತನಾಡುವಾಗಆಗ್ರಹಿಸಿದ್ದರು.

‘ರಾಹುಲ್ ಗಾಂಧಿ ಹೇಳಿಕೆ ಸಂಪೂರ್ಣ ಖಂಡನಾರ್ಹ’ ಎಂದು ದೇವೇಂದ್ರ ಫಡಣವೀಸ್ ಟ್ವೀಟ್ ಮಾಡಿದ್ದರು.

‘ವೀರ್ ಸಾವರ್ಕರ್ ಅಥವಾ ಅವರು ಮಾಡಿರುವ ಉತ್ತಮ ಕೆಲಸಗಳಿಗೆ ಹೋಲಿಸಿಕೊಳ್ಳುವಂಥದ್ದು ರಾಹುಲ್ ಗಾಂಧಿ ಬಳಿ ಏನೂ ಇಲ್ಲ. ತನ್ನನ್ನು ತಾನು ಗಾಂಧಿ ಎಂದು ಕರೆದುಕೊಳ್ಳುವ ದೊಡ್ಡ ತಪ್ಪನ್ನು ರಾಹುಲ್ ಮಾಡಿದ್ದಾರೆ. ಹೆಸರಿನಲ್ಲಿ ಗಾಂಧಿ ಇದ್ದ ಮಾತ್ರಕ್ಕೆ ಯಾರೂ ಮಹಾತ್ಮನ ಎತ್ತರ ಏರಲು ಸಾಧ್ಯವಿಲ್ಲ’ಎಂದು ಫಡಣವೀಸ್‌ ಟೀಕಿಸಿದ್ದರು.

ಪೌರತ್ವ ಕಾಯ್ದೆ ಬಗ್ಗೆ ತನ್ನ ನಿಲುವು ಸಡಿಲಿಸಿರುವ ಬಗ್ಗೆ ಶಿವಸೇನಾವನ್ನು ಬಿಜೆಪಿ ಈಗಾಗಲೇ ಟೀಕಿಸಿದೆ. ಉದ್ಧವ್‌ಗೆ ಈಗ ಎಲ್ಲವನ್ನೂ ಬ್ಯಾಲೆನ್ಸ್‌ ಮಾಡುವ ಅನಿವಾರ್ಯತೆ ಎದುರಾಗಿದೆ.

ಅಧಿಕಾರಕ್ಕೆ ಬಂದ ತಕ್ಷಣ ನರೇಂದ್ರ ಮೋದಿ ಅವರು ಮೆಚ್ಚಿನ ಬುಲೆಟ್ ರೈಲು ಯೋಜನೆ ಹಾಗೂ ಇತರ ಯೋಜನೆಗಳ ಮರುಪರಿಶೀಲನೆಗೆ ಉದ್ಧವ್ ಠಾಕ್ರೆ ಆದೇಶಿಸಿರುವುದು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಮೆಟ್ರೊ ಯೋಜನೆಗೂ ಉದ್ಧವ್ ತಡೆಯಾಜ್ಞೆ ನೀಡಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದ ಬಗ್ಗೆ ಉದ್ಧವ್ ತಳೆಯುತ್ತಿರುವ ನಿಲುವಿನ ಬಗ್ಗೆಯೂ ಬಿಜೆಪಿಗೆ ಅಸಮಾಧಾನವಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟನ್ನು ನಿರ್ವಹಿಸುವ ಮತ್ತು ರೈತರಿಗೆಸೂಕ್ತ ಪರಿಹಾರ ಘೋಷಿಸಬೇಕಾದ ಒತ್ತಡವನ್ನೂ ಉದ್ಧವ್ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.