ಜಲ್ನಾ (ಮಹಾರಾಷ್ಟ್ರ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಅಥವಾ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ತಿಳಿಸಿದ್ದಾರೆ. ನಾಮಪತ್ರ ವಾಪಸ್ ವಾಪಸ್ ಪಡೆಯುವಂತೆ ಅವರು ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸದಿರುವ ಮತ್ತು ಯಾರನ್ನೂ ಬೆಂಬಲಿಸದೆ ಇರುವ ಜರಾಂಗೆ ಅವರ ನಿರ್ಧಾರ ರಾಜಕೀಯ ವಲಯದಲ್ಲಿ ಹೊಸ ತಿರುವು ಪಡೆದಿದೆ. ಈ ಹಿಂದೆ ಅವರು ಕೆಲವರನ್ನು ಬೆಂಬಲಿಸಲು ಅಥವಾ ವಿರೋಧಿಸಲು ಕೆಲವು ಕ್ಷೇತ್ರಗಳನ್ನು ಗುರುತಿಸಿಕೊಂಡಿದ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜರಾಂಗೆ, ‘ಸಾಕಷ್ಟು ಚರ್ಚೆಯ ನಂತರ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದೇನೆ. ಯಾರನ್ನು ಸೋಲಿಸಬೇಕು ಮತ್ತು ಚುನಾಯಿಸಬೇಕು ಎಂಬುದನ್ನು ಮರಾಠ ಸಮುದಾಯ ನಿರ್ಧರಿಸಲಿದೆ. ನಾನು ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡಿಲ್ಲ’ ಎಂದು ತಿಳಿಸಿದರು.
ಆಡಳಿತಾರೂಢ ಮಹಾಯುತಿ ಅಥವಾ ವಿರೋಧ ಪಕ್ಷದ ಮಹಾ ವಿಕಾಸ ಅಘಾಡಿಯ (ಎಂವಿಎ) ಒತ್ತಡಕ್ಕೆ ಒಳಗಾಗಿಲ್ಲ. ‘ಮರಾಠ ಸಮುದಾಯದ ಒಳಿತನ್ನು ಗಮನದಲ್ಲಿಟ್ಟುಕೊಂಡು ಯಾರನ್ನು ಬೆಂಬಲಿಸಬೇಕು ಎಂಬುದನ್ನು ಸಮುದಾಯವು ನಿರ್ಧರಿಸಲಿದೆ’ ಎಂದು ತಿಳಿಸಿದ್ದಾರೆ.
14 ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಬೇಕಿತ್ತು. ಆದರೆ, ತಮ್ಮ ಬೆಂಬಲಿಗರು ಈವರೆಗೂ ಪಟ್ಟಿಯನ್ನೇ ತಲುಪಿಸಿಲ್ಲ. ಅಲ್ಲದೆ ನಾವು ಒಂದೇ ಸಮುದಾಯದ (ಮರಾಠ) ಮತಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ,’ ಎಂದು ಅವರು ತಿಳಿಸಿದ್ದಾರೆ.
ಚುನಾವಣೆಯಿಂದ ಹಿಂದೆ ಸರಿಯುವುದನ್ನು ಬಿಟ್ಟರೆ ನಮಗೆ ಯಾವುದೇ ಆಯ್ಕೆಯಿಲ್ಲ. ‘ನಾನು ಅಭ್ಯರ್ಥಿಗಳಿಗೆ ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡುತ್ತೇನೆ. ನಮ್ಮ ಹೋರಾಟ (ಮರಾಠ ಮೀಸಲಾತಿ) ಚುನಾವಣೆ ಬಳಿಕವೂ ಮುಂದುವರಿಯುತ್ತದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.