ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ, ವರ್ಧಾ ಜಿಲ್ಲೆಗಳಲ್ಲಿ ಜೂನ್ 21ರಿಂದ 23ರ ನಡುವೆ ಸುರಿದ ಭಾರಿ ಮಳೆಯಿಂದಾಗಿ 20,274 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಮಳೆಯಿಂದಾಗಿ 96 ಹಳ್ಳಿಗಳ 1,964 ಹೆಕ್ಟೇರ್ ಪ್ರದೇಶ ಪ್ರವಾಹಕ್ಕೆ ಕೊಚ್ಚಿಹೋಗಿದೆ. ಹತ್ತಿ, ತೊಗರಿ, ಸೋಯಾಬೀನ್, ಮೆಕ್ಕೆಜೋಳ ಮತ್ತು ತರಕಾರಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ನಾಗ್ಪುರ ಜಿಲ್ಲೆಯ 126 ಹಳ್ಳಿಗಳಲ್ಲಿ 9,176.55 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿವೆ. ಇತ್ತ ವರ್ಧಾ ಜಿಲ್ಲೆಯಲ್ಲಿ 418.70 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದ್ದ ಹತ್ತಿ, ತೊಗರಿ ಮತ್ತು ಸೋಯಾಬೀನ್ ಬೆಳೆಗಳು ನಾಶವಾಗಿವೆ.
ಮಳೆಯಿಂದ ಕೃಷಿ ಉತ್ಪನ್ನಗಳಿಗೆ ಆಗಿರುವ ಹಾನಿ ಕುರಿತಾದ ಅಂತಿಮ ವರದಿಯನ್ನು ರಾಜ್ಯ ಕಂದಾಯ ಇಲಾಖೆಯಿಂದ ನಿರೀಕ್ಷಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.