ಔರಂಗಬಾದ್: ಮೊಘಲ್ ದೊರೆ ಔರಂಗಜೇಬನ ಸಮಾಧಿಯ ಅವಶ್ಯಕತೆ ಬಗ್ಗೆ ಪ್ರಶ್ನಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ನಾಯಕರು, ಸಮಾಧಿಯನ್ನು ನೆಲಸಮ ಮಾಡಬೇಕು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಔರಂಗಜೇಬನ ಸಮಾಧಿಯಿರುವ ಸ್ಥಳದಲ್ಲಿ ಭದ್ರತೆ ಹೆಚ್ಚಳ ಮಾಡಿರುವುದಾಗಿ ಬುಧವಾರ ಎಎಸ್‌ಐ ಅಧಿಕಾರಿ ಹೇಳಿದ್ದಾರೆ.
ಸಮಾಧಿ ಸ್ಥಳಕ್ಕೆ ಇತ್ತೀಚೆಗೆ ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಒವೈಸಿ ಭೇಟಿ ನೀಡಿದನ್ನು ಶಿವಸೇನಾ ಟೀಕಿಸಿತ್ತು. ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು.
ಮಹಾರಾಷ್ಟ್ರದಲ್ಲಿ ಔರಂಗಜೇಬನ ಸಮಾಧಿಯ ಅವಶ್ಯಕತೆ ಏನಿದೆ? ಅದನ್ನು ನೆಲಸಮ ಮಾಡಬೇಕು. ಹಾಗೆ ಮಾಡಿದರೆ ಜನರು ಅಲ್ಲಿಗೆ ಹೋಗುವುದಿಲ್ಲ ಎಂದು ಎಂಎನ್‌ಎಸ್ ವಕ್ತಾರ ಗಜಾನನ್ ಕಾಳೆ ಅವರು ಟ್ವೀಟ್ ಮಾಡಿದ್ದರು.
ಇದಾದ ಬಳಿಕ ಪುರಾತತ್ವ ಇಲಾಖೆಯಡಿ ರಕ್ಷಣೆಯಲ್ಲಿರುವ ಸಮಾಧಿ ಸ್ಥಳ ಖುಲ್ತಬಾದ್‌ಗೆ ಕೆಲವರು ಬೀಗ ಜಡಿಯುವ ಪ್ರಯತ್ನ ನಡೆಸಿದ್ದಾರೆ.
ಸಮಾಧಿಗೆ ಒವೈಸಿ ಭೇಟಿ ಕುರಿತು ಪ್ರತಿಕ್ರಿಯಿಸಿದ್ದ ಎನ್‌ಸಿಪಿ ಮುಖಂಡ ಶರದ್ ಪವಾರ್, ಮಹಾರಾಷ್ಟ್ರದ ಶಾಂತಿಯುತ ವಾತಾವರಣವನ್ನು ಹಾಳು ಮಾಡುವ ಕೃತ್ಯ ಎಂದು ಕಿಡಿಕಾರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.