ಮುಂಬೈ: ಮಹಾರಾಷ್ಟ್ರದಲ್ಲಿ ಈ ವರ್ಷದ ಜನವರಿಯಿಂದ ಜುಲೈವರೆಗೆ 1,267 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಅಮರಾವತಿ ಆಡಳಿತ ವಿಭಾಗದ ಜಿಲ್ಲೆಗಳಲ್ಲಿ 557 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛತ್ರಪತಿ ಸಂಭಾಜಿನಗರ ವಿಭಾಗದ ಜಿಲ್ಲೆಗಳಲ್ಲಿ 430 ಸಾವುಗಳು ದಾಖಲಾಗಿವೆ. ಇದರೊಂದಿಗೆ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರದೇಶದ ಪೈಕಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ನಾಸಿಕ್ ವಿಭಾಗದಲ್ಲಿ 137, ನಾಗ್ಪುರ ವಿಭಾಗದಲ್ಲಿ 130, ಪುಣೆ ವಿಭಾಗದಲ್ಲಿ 13 ಮಂದಿ ರೈತರು ಸಾವಿಗೀಡಾಗಿದ್ದಾರೆ. ಕರಾವಳಿ ವಿಭಾಗದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ರಾಜ್ಯ ಸರ್ಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ ದತ್ತಾಂಶದ ಪ್ರಕಾರ 2022ರಲ್ಲಿ ದೇಶದಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ ಶೇ 37.6ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿದ್ದವು.
2022ರಲ್ಲಿ ದೇಶದಲ್ಲಿ 1,70,924 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಪೈಕಿ ಮಹಾರಾಷ್ಟ್ರದಲ್ಲಿ 5,207 ರೈತರು ಮತ್ತು 6,083 ಕೃಷಿ ಕಾರ್ಮಿಕರು ಸೇರಿದಂತೆ ಒಟ್ಟು 11,290 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು.
2021ರಲ್ಲಿ ದೇಶದಲ್ಲಿ 1,64,033 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಪೈಕಿ ಮಹಾರಾಷ್ಟ್ರದಲ್ಲಿ 10,881 ರೈತರು ಕೊನೆಯುಸಿರೆಳೆದಿದ್ದರು.
2020ರಲ್ಲಿ ದೇಶದಲ್ಲಿ 1,53,052 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಪೈಕಿ ಮಹಾರಾಷ್ಟ್ರದಲ್ಲಿ 10,677 ರೈತರು ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.